ಮನ ರಂಜಿಸಿದ ಸಾಂಸ್ಕøತಿಕ ಸಂಜೆ
ಬೀದರ:ಏ.11: ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಇಲ್ಲಿಯ ಗುಂಪಾ ರಸ್ತೆಯಲ್ಲಿನ ರಿಲಯನ್ಸ್ ಟ್ರೆಂಡ್ಸ್ ಕೆಳಗಡೆ ಇರುವ ಮಹಾಲಕ್ಷ್ಮಿ ಕಾಂಪ್ಲೆಕ್ಸನ ನಾಟ್ಯಶ್ರೀ ಸಾಂಸ್ಕøತಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಂಸ್ಕøತಿಕ ಸಂಜೆ ಸಭಿಕರ ಮನ ರಂಜಿಸಿತು.
ಕಲಾವಿದರು ಸಂಗೀತ, ನೃತ್ಯ, ನೃತ್ಯ ರೂಪಕಗಳ ಮೂಲಕ ಕಲಾ ಲೋಕವನ್ನೇ ಸೃಷ್ಟಿಸಿದರು. ವಿಷ್ಣುವಿನ ಹತ್ತು ಅವತಾರಗಳ ದಶಾವತಾರ ನೃತ್ಯ ರೂಪಕ, ಜಕ್ಕಣಕ ಜಾನಪದ ನೃತ್ಯ, ಗಣೇಶ ಸ್ತುತಿ ಮೊದಲಾದವು ನೆರೆದವರ ಕರತಾಡನಕ್ಕೆ ಪಾತ್ರವಾದವು.
ಪೂರ್ವಿಕ ಮತ್ತು ತಂಡದವರು ದಶಾವತಾರ ನೃತ್ಯ ರೂಪಕ, ಅಮೃತಾ ಶೆಟ್ಟಿ ಹಾಗೂ ತಂಡ ಶಾಸ್ತ್ರೀಯ ಸಂಗೀತ, ಮಹೇಶಕುಮಾರ ಮತ್ತು ತಂಡ ಜಾನಪದ ಗೀತೆ, ರಶ್ಮಿ, ಶ್ವೇತಾ ಹಾಗೂ ತಂಡ ಭರತನಾಟ್ಯ, ನಿತ್ಯ ಮತ್ತು ತಂಡ ಸಮೂಹ ನೃತ್ಯ, ರಾಜೇಶ್ವರಿ ಹಾಗೂ ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರು.
ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಉಡುಪಿಯ ಉಪನ್ಯಾಸಕಿ ಅಕ್ಷಯಾ ಗೋಖಲೆ ಉದ್ಘಾಟಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಜ್ಞಾನಸುಧಾ ವಿದ್ಯಾಲಯದ ನಿರ್ದೇಶಕ ಮುನೇಶ್ವರ ಲಾಖಾ, ಡಾ. ಲೀಲಾವತಿ ನಿಂಬೂರೆ, ಚಿಂತಕಿ ಶೀಲಾ ಪಾಟೀಲ ಗಾದಗಿ ಮುಖ್ಯ ಅತಿಥಿಯಾಗಿದ್ದರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಮಕೃಷ್ಣ ಸಾಳೆ, ನಾರಾಯಣರಾವ್ ಮುಖೇಡಕರ್, ಕೆ. ಗುರುಮೂರ್ತಿ, ಭಾರತಿ ವಸ್ತ್ರದ್, ಪ್ರತಿಭಾ ಚಾಮಾ ಮತ್ತಿತರರು ಇದ್ದರು.
ಭಾನುಪ್ರಿಯ ಅರಳಿ ಪ್ರಾರ್ಥನೆ ನಡೆಸಿಕೊಟ್ಟರು. ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕ ಸತ್ಯಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಮೂಲಗೆ, ದೇವಿದಾಸ ಜೋಶಿ ನಿರೂಪಿಸಿದರು. ರಾಘವೇಂದ್ರ ಅಡಿಗ ವಂದಿಸಿದರು.
ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಿ
ಬೀದರ್: ಪಾಲಕರು ತಮ್ಮ ಮಕ್ಕಳನ್ನು ಸತ್ಪ್ರಜೆಗಳಾಗಿ ರೂಪಿಸಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರೂ ಆದ ಉಡುಪಿಯ ಉಪನ್ಯಾಸಕಿ ಅಕ್ಷಯಾ ಗೋಖಲೆ ಸಲಹೆ ಮಾಡಿದರು.
ಪಾಲಕರ ಉತ್ತಮ ಸಂಸ್ಕಾರದಿಂದಾಗಿಯೇ ಶಿವಾಜಿ ಮಹಾರಾಜ್, ಸ್ವಾಮಿ ವಿವೇಕಾನಂದರಂಥವರು ಉನ್ನತ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.
ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ಪಾಲಕರ ನಡೆ, ನುಡಿಗಳನ್ನು ಮಕ್ಕಳು ಅನುಕರಿಸುವುದರಿಂದ ಪಾಲಕರು ಮೊದಲು ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯಬೇಕು. ಆಗ ಮಕ್ಕಳು ತನ್ನಿಂದ ತಾನೇ ಹೋಂ ವರ್ಕ್ ಮಾಡುತ್ತಾರೆ. ಪಠ್ಯಪುಸ್ತಕ ಹಿಡಿಯುತ್ತಾರೆ ಎಂದು ತಿಳಿಸಿದರು.
ಟಿವಿ ಧಾರಾವಾಹಿ ನೋಡುವುದು ಬಿಟ್ಟು ದೇವರ ಮುಂದೆ ಕುಳಿತು ಭಜನೆ ಮಾಡಿದರೂ ಮಕ್ಕಳು ಸಂಸ್ಕಾರವಂತರಾಗುತ್ತಾರೆ ಎಂದು ಹೇಳಿದರು.