ಮತದಾನ ಜಾಗೃತಿಗಾಗಿ ಬೈಕ್  ರ‍್ಯಾಲಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧೧; ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ  ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಚಿತ್ರದುರ್ಗ ನಗರದಲ್ಲಿ ಬೈಕ್  ರ‍್ಯಾಲಿ   ನಡೆಯಿತು.ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ಅವರು ಮತದಾನ ಜಾಗೃತಿಗಾಗಿ ಬೈಕ್   ರ‍್ಯಾಲಿ   ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಇದೇ ಏಪ್ರಿಲ್ 26ರಂದು ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡು, ತಮ್ಮ ಮತದಾನ ಹಕ್ಕು ಚಲಾಯಿಸಲು ಸುವರ್ಣ ಅವಕಾಶ. ಪ್ರತಿ ಐದು ವರ್ಷಕೊಮ್ಮೆ ಬರುವ ಈ ಹಬ್ಬದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿರುವ ಎಲ್ಲ ಅರ್ಹ ಮತದಾರರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು. ತಾವುಗಳು ಮತ್ತು ನಿಮ್ಮ ಸ್ನೇಹಿತರು, ಬಂಧುಗಳಿಗೆ ಮತ್ತು ಕುಟುಂಬದವರಿಗೆ ಮತದಾನ ಮಾಡುವಂತೆ ತಿಳಿಸಿದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ.70ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.5ರಷ್ಟು ಮತದಾನದ ಪ್ರಮಾಣ ಹೆಚ್ಚಾಗಲು ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಯಾವುದೇ ಭಯ ಪಡದೇ ನಿರ್ಭಿತಿಯಿಂದ ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರು ಕೂಡ ಮತದಾನದಿಂದ ವಂಚಿತರಾಗಬಾರದು ಎಂದು ಹೇಳಿದರು.