ಹಿರಿಯ ನಾಗರಿಕರ ಮತದಾನ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮ-ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧೧: 85 ವರ್ಷ ದಾಟಿದ ಹಿರಿಯ ನಾಗರೀಕರಿಗೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ಇದರೊಂದಿಗೆ ಮತಗಟ್ಟೆ ಕೇಂದ್ರಗಳಲ್ಲಿ ಹಿರಿಯರು ನಾಗರಿಕರು ಮತದಾನ ಮಾಡಲು ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ಜಿ.ಪಂ ಸಿಇಓ ಎಸ್.ಜೆ.ಸೋಮಶೇಖರ್ ಹೇಳಿದರು.ಚಿತ್ರದುರ್ಗ ನಗರದ ಕೆಳಗೋಟೆಯ ಸಿ.ಕೆ.ಪುರ ಬಡಾವಣೆಯಲ್ಲಿರುವ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಏಪ್ರಿಲ್ 26 ರಂದು ನಡೆಯುವ ಮತದಾನ ಎನ್ನುವ, ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರು ಪಾಲ್ಗೊಂಡು ತಮ್ಮ ಮತದಾನ ಹಕ್ಕು ಚಲಾಯಿಸಬೇಕು. ಪ್ರತಿ 5 ವರ್ಷಕೊಮ್ಮೆ ಬರುವ ಈ ಹಬ್ಬದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಳ್ಳ 18 ವರ್ಷ ತುಂಬಿದ ಪುರುಷ ಮತ್ತು ಮಹಿಳೆಯರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಸುವರ್ಣ ಅವಕಾಶವನ್ನು ಯಾರು ಕೈಚೆಲ್ಲಬಾರದು ಎಂದರು.ಕುಟುಂಬದಲ್ಲಿ ಗೌರವ, ಪ್ರೀತಿ ಮತ್ತು ಮಮತೆ ಇವೆಲ್ಲವನ್ನು ಕಾಪಾಡಿಕೊಂಡು ಬಂದಿರುವ ಹಿರಿಯರು, ಮನೆಯ ಎಲ್ಲ ಸದಸ್ಯರು ಹಾಗೂ ಸ್ನೇಹಿತರು, ಬಂಧು ಬಳಗದವರು ಮತದಾನ ಮಾಡುವಂತೆ ತಿಳಿ ಹೇಳಬೇಕು. ನಿಮ್ಮ ಜೀವನದಲ್ಲಿ ಬಹಳಷ್ಟು ಚುನಾವಣೆಗಳನ್ನು ನೋಡಿದ್ದೀರಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.70 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.5% ರಷ್ಟು ಮತದಾನದ ಪ್ರಮಾಣ ಹೆಚ್ಚು ಮಾಡಲು ಗುರಿ ಹೊಂದಲಾಗಿದೆ. ಪ್ರತಿಯೊಬ್ಬರು ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಎಸ್.ಜೆ.ಸೋಮಶೇಖರ್ ತಿಳಿಸಿದರು.