ಆದಿಮ ಒಂದು ಸಾಂಸ್ಥಿಕ ಶಕ್ತಿಯಾಗಿ ಬೆಳದಿದೆ
ಕೋಲಾರ,ಸೆ.೨೦-ಆದಿಮದ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಆದಿಮ ನಡೆದು ಬಂದ ದಾರಿ, ಇಲ್ಲಿ ಬೆಳೆದ ಕವಿಗಳು, ನಾಟಕಕಾರರು, ಕಲಾವಿದರು ನಾಡಿನಾದ್ಯಂತ ಅನೇಕರಿದ್ದಾರೆ.ಕೋಲಾರದ ದಲಿತ ಹೋರಾಟಗಳ ಇತಿಹಾಸದ ಹಿನ್ನೆಲೆ ಗಮನಿಸಿದಾಗ ಆದಿಮ ಗುರುತಿಗೆ ಬರುತ್ತದೆ. ಬೆಟ್ಟ ಏರಿದ ಮೇಲೆ ನಗರ ಮಾಯವಾಗುತ್ತದೆ. ಅಂತಹ ಪರಿಸರದ ನಡುವೆ ಆದಿಮ ನೆಲೆ ನಿಂತಿದೆ. ನನ್ನ ಗುರುಗಳಾದ ಸಿದ್ಧಲಿಂಗಯ್ಯನವರ ಸ್ಮರಣೆಯಲ್ಲಿ ನಾಟಕೋತ್ಸವ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ .ಸಿದ್ಧಲಿಂಗಯ್ಯನವರು ಒಂದು ಜನಾಂಗ ರೂಪಿಸಿದ ಕವಿ. ಕೋಲಾರ ಶರಣ ಸಂತರ ನೆಲ. ಆದ್ದರಿಂದ ಆದಿಮ ಒಂದು ಸಾಂಸ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್.ಎಲ್.ಪುಷ್ಪ, ಅಭಿಪ್ರಾಯ ಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಡಾ.ಸಿದ್ಧಲಿಂಗಯ್ಯನವರ ನೆನಪಿನ ನೆಲಸಂಸ್ಕೃತಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ ಹೀಗೆಯೇ ಸಂಸ್ಥೆ ಮುಂದುವರೆದು ಬೆಳೆಯಲಿ ಎಲ್ಲರ ಸಹಕಾರವಿರಲಿ ಎಂದರು.
ಗದ್ದುಗೆ ಗೌರವ ಸ್ವೀಕರಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಭ್ರಮಯೆಂಬ ಬಂಡಿಯಲ್ಲಿ ಅತಿಗಳನ್ನು ತುಂಬಿಕೊಂಡು ಭ್ರಮಾಲೋಕದಲ್ಲಿರುವುದು ಸರಿಯಾದುದಲ್ಲ ಎಂದವರು ಪ್ರೇಕ್ಷಕರ ಕೋರಿಕೆ ಮೇರೆಗೆ ಎರಡು ಹಾಡುಗಳನ್ನು ಹಾಡಿದರು.
ಗದ್ದುಗೆ ಗೌರವ ಸ್ವೀಕರಿಸಿದ ವೈ.ಜಿ.ಉಮಾ ಮಾತನಾಡಿ, ಇವರ ಈ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಪ್ರಗತಿ ಗಮನಿಸಿ ಆದಿಮ ಗದ್ದುಗೆ ಗೌರವ ನೀಡಿದೆ.
ಉಮಾ ಮಾತನಾಡುತ್ತಾ ತನ್ನ ಬದುಕಿನ ಕಷ್ಟದ ದಿನಗಳನ್ನು ಮೆಲುಕು ಹಾಕಿಕೊಳ್ಳುವಾಗ ತಾನಾಗಿ ತನ್ನ ಕಣ್ಣಾಲೆಗಳ ತೇವರಿಸಿದವು. ಬಾಲ್ಯದಿಂದ ಇಲ್ಲಿಯ ತನಕ ಪ್ರತಿ ಹಂತದಲ್ಲಿ ಸಹಾಯಕ್ಕೆ ನಿಂತ ಶಿಕ್ಷಕರು, ಸ್ನೇಹಿತರು, ಹಿರಿಯರಾದ ಕೋಟಗಾನಹಳ್ಳಿ ರಾಮಯ್ಯ, ಬುರ್ರ್‍ಅಕಥೆಯ ಲಕ್ಷ್ಮಮ್ಮ ಹೀಗೇ ಎಲ್ಲರನ್ನೂ ಸ್ಮರಿಸಿಕೊಂಡರು. ಪ್ರೇಕ್ಷಕರ ಕೋರಿಕೆಯಂತೆ ಉಮಾ ಹಾಗೂ ಆಕೆ ತಾಯಿ ಜನಪದ ಹಾಡುಗಳನ್ನು ಹಾಡಿ ಕೇಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಜಿ.ಪಿ.ಓ.ಚಂದ್ರು ಮಾತನಾಡಿ, ಮೂರು ದಿನಗಳ ನಾಟಕೋತ್ಸವ ಅದ್ಭುತವಾಗಿ ನಡೆದಿದೆ. ಪ್ರತಿ ವರ್ಷವೂ ಆದಿಮದಲ್ಲಿ ನಾಟಕೋತ್ಸವ ನಡೆಸುವ ಭರವಸೆಯನ್ನು ನಾಟಕ ಅಕಾಡೆಮಿಯ ಪರವಾಗಿ ಕೊಟ್ಟರು.
ನಾಟಕೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗದ್ದುಗೆ ಗೌರವ, ನಾಟಕಗಳ ಪ್ರದರ್ಶನ ಹಾಗೂ ಸಂವಾದ ಸುಸೂತ್ರವಾಗಿ ನೆರವೇರಿತು. ಸಹಕರಿಸಿದ ಸರ್ವರಿಗೂ ಆದಿಮ ಹಾಗೂ ನಾಟಕ ಅಕಾಡೆಮಿ ಅಭಿನಂದನೆಗಳು ಸಲ್ಲಿಸುತ್ತದೆ ಎಂದರು.
ಹರೀಶ್ ಆದಿಮ ತಂಡ ನಡೆಸಿಕೊಟ್ಟ ಡೊಳ್ಳು ಕುಣಿತ, ತಮಟೆ ವಾದನ, ತಮಟೆ ತುಡುಮು ಜುಗುಲ್ಬಂಧಿ ಪ್ರೇಕ್ಷಕರ ಗಮನ ಸೆಳೆದಿದ್ದವು.
ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ನಾಟಕಕಾರ ಡಾ.ಎಂ.ಭೈರೇಗೌಡ ಹಾಗೂ ಆದಿಮ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ ಇದ್ದರು.