ಪ್ರತಿಯೊಬ್ಬರೂ ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸಿ : ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ
ಅಥಣಿ: ಸೆ.೨೦:ಅಂತರ್ಜಾಲ ಹಾಗೂ ತಂತ್ರಜ್ಞಾನ ಬಳಸಿಕೊಂಡು ಪ್ರಸ್ತುತ ದಿನಗಳಲ್ಲಿ ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡಲಾಗುತ್ತಿದ್ದು, ಸೈಬರ್ ಅಪರಾಧದ ಬಗ್ಗೆ ಪ್ರತಿಯೊಬ್ಬರೂ ತಮ್ಮ ಡಾಟಾಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಅಥಣಿ ವಲಯದ ಡಿವೈಎಸ್ಪಿ ಪ್ರಶಾಂತ ಮುನ್ನೊಳ್ಳಿ ಹೇಳಿದರು.
ಅವರು ಗುರುವಾರ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮಿಜಿಐ ಮಹಾವಿದ್ಯಾಲಯದ ಸನ್ ೨೦೨೪-೨೫ನೇ ಸಾಲಿನ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂರು ದಿನಗಳ ಕಾಲ ನಡೆಯಲಿರುವ ದೀಕ್ಷಾರಂಭ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಿಂದ ಎಷ್ಟು ಅನುಕೂಲತೆಗಳಿವೆಯೂ ಅಷ್ಟೇ ಅನಾನುಕೂಲತೆಗಳು ಕೂಡಾ ಇವೆ. ಯಾವ ಬ್ಯಾಂಕಿನವರು ಕೂಡ ಮೊಬೈಲ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ಕೇಳುವುದಿಲ್ಲ. ವಂಚನೆ ಮಾಡುವವರು ನಿಮ್ಮ ನಂಬರಿಗೆ ಕರೆ ಮಾಡಿ ಓಟಿಪಿ ಕೇಳಿದಾಗ ನೀವು ಅವರನ್ನು ನಂಬಿ ಸತ್ಯ ಹೇಳಿದರೆ ಮೋಸ ಹೋಗುವುದು ಗ್ಯಾರಂಟಿ. ಹೀಗಾದಾಗ ತಕ್ಷಣ ಬ್ಯಾಂಕಿನಲ್ಲಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕು. ಒಂದು ಸೈಬರ್ ಕ್ರೈಂ ಆಗಿದ್ದರೆ ಅದಕ್ಕೆ ಕಾನೂನು ರೀತಿ ಯಾವ ಅನುಸರಿಸಬೇಕು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಂಡಿರಬೇಕು ಎಂದು ಸಲಹೆ ನೀಡಿದ ಅವರು ಕಾನೂನುಗಳ ಬಗ್ಗೆ ವಿವರವಾಗಿ ತಿಳಿಸಿದರು
ಪ್ರತಿಯೊಬ್ಬರ ಜೀವನದಲ್ಲಿ ಸಾಧಿಸಬೇಕಾದರೆ ತಂದೆ-ತಾಯಿ ಗುರುಗಳ ಮಾರ್ಗದರ್ಶನ ಅತ್ಯವಶ್ಯಕ ಮತ್ತು ಜೀವನದಲ್ಲಿ ನೂರಾರು ವಿಘ್ನಗಳು ಬರುವುದು ಸಹಜ ಅವುಗಳನ್ನು ಧೈರ್ಯದಿಂದ ಎದುರಿಸಿ ಗುರಿ ಮುಟ್ಟುವನೆ ನಿಜವಾದ ಸಾಧಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಿ.ಎಸ್.ಕಾಂಬಳೆ ಮಾತನಾಡಿ ಸೈಬರ ಅಪರಾಧಗಳಿಂದ ಆಗುವ ಅನಾಹುತಗಳು ಮತ್ತು ಯುವಕರ ಜವಾಬ್ದಾರಿ ಕುರಿತು ಕಿವಿಮಾತು ಹೇಳಿದರು.
ಈ ವೇಳೆ ಇಮ್ರಾನ ಮುಲ್ಲಾ. ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಭಾರತಿ ಎಸ್ ಗದ್ದಿ ಸ್ವಾಗತಿಸಿದರು. ಕುಮಾರಿ.ಸೌಮ್ಯಾ ದೇಶಿಂಗೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ ಮಗದುಮ ಪರಿಚಯಿಸಿದರು.ಅಚ್ಚುತಾನಂದ ಕೆ ಎಮ್. ವಂದಿಸಿದರು.
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳದಂತೆ ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿದ್ದು, ನಾವು ಮೊಬೈಲ್ ಮತ್ತು ಕಂಪ್ಯೂಟರ ಬಳಕೆಯಲ್ಲಿ ಬಹಳ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪ್ರತಿನಿತ್ಯ ನಾವು ಬಳಸುವ ಮೊಬೈಲ್ ಮತ್ತು ಕಂಪ್ಯೂಟರನಲ್ಲಿ ಸೈಬರ್ ಕ್ರೈಂ ಆಗದಂತೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.