ರೈತರು ಅಧಿಕ ಇಳುವರಿಯ ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿ : ಅಧ್ಯಕ್ಷ ಪರಪ್ಪ ಸವದಿ
ಅಥಣಿ : ಸೆ.೨೦:ಖಾಸಗಿ ಸಕ್ಕರೆ ಕಾರ್ಖಾನೆಗಳ ಸಾಕಷ್ಟು ಪೈಪೋಟಿಯ ನಡುವೆಯೂ ೨೦೨೩-೨೪ ನೇ ಸಾಲಿನ ಹಂಗಾಮಿನಲ್ಲಿ ಪೂರೈಕೆಯಾದ ಪ್ರತಿ ಟನ್ ಕಬ್ಬಿಗೆ ನಮ್ಮ ಕಾರಖಾನೆಯಿಂದ ಕೇಂದ್ರ ಸರಕಾರ ನಿಗದಿ ಪಡಿಸಿದ ಎಫ್.ಆರ್.ಪಿ ದರಕ್ಕಿಂತ ಹೆಚ್ಚಿನ ಬಿಲ್ಲನ್ನು ನಿಗದಿತ ಅವಧಿಯಲ್ಲಿಯೇ ರೈತರಿಗೆ ಪಾವತಿಸಲಾಗಿದೆ ಎಂದು ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು.
ಅವರು ಗುರುವಾರ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ೩೨ ನೇ ವಾರ್ಷಿಕ ಸರ್ವ
ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಮ್ಮ ಕಾರಖಾನೆಯ ಆಡಳಿತ ಮಂಡಳಿಯು ತನ್ನದೇ ಆದ ಮುಂದಾಲೋಚನೆಯನ್ನು ರೂಪಿಸಿಕೊಂಡು ಪ್ರಗತಿ ಪಥದತ್ತ ಕೊಂಡೋಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿ ವರ್ಷದಂತೆ ಶೇರು ಸದಸ್ಯರಿಗೆ ಪ್ರತಿ ಶೇರಿಗೆ ೫೦ ಕೆ.ಜಿ ಹಾಗೂ ಕಬ್ಬು ಪೂರೈಕೆದಾರರಿಗೆ ಪ್ರತಿ ಟನ್ ಕಬ್ಬಿಗೆ ೫೦೦ ಗ್ರಾಮನಂತೆ ಮತ್ತು ಕಾರಖಾನೆಯ ಸಿಬ್ಬಂದಿ ಕಾರ್ಮಿಕರಿಗೆ ೨೫ ಕೆ.ಜಿಯಂತೆ ಪ್ರತಿ ಕಿಲೋಗೆ ರಿಯಾಯತಿ ದರ ೨೦ ರೂ.ಗಳಂತೆ ವಿತರಿಸಲಾಗುವುದು ಎಂದ ಅವರು ನಮ್ಮ ಕಾರಖಾನೆಗೆ ೨೦೨೩-೨೪ ಸಾಲಿನಲ್ಲಿ ೬೫, ೮೬, ೬೬೬ ರೂ.ಗಳಷ್ಟು ನಿವ್ವಳ ಲಾಭವಾಗಿದ್ದು, ಮುಂಬರುವ ಹಂಗಾಮಿನಲ್ಲಿ ಉತ್ತಮ ಇಳುವರಿಯುಳ್ಳ ಕಬ್ಬನ್ನು ಪೂರೈಕೆ ಮಾಡಬೇಕು ಎಂದು ಮನವಿ ಮಾಡಿದರು.
ಕಳೆದ ಹಂಗಾಮಿನಲ್ಲಿ ೫,೬೦,೯೧೭ ಟನ್ ಕಬ್ಬು ನುರಿಸಿ ೧೦.೯೬ ಇಳುವರಿ ಮೂಲಕ ೬೦೮೦೦೦ ಕ್ವಿಂಟಾಲ್ ಸಕ್ಜರೆ ಉತ್ಪಾದಿಸಲಾಗಿದೆ ಜೊತೆಗೆ ೩ ಕೋಟಿ ೬೩ ಲಕ್ಷ ೩೪ ಸಾವಿರ ಯೂನಿಟ್ ವಿದ್ಯುತ್ ಉತ್ಪಾದಿಸಲಾಗಿದೆ ಎಂದು ಹೇಳಿದರು.
ಈ ವೇಳೆ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಮಾತನಾಡಿ, ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ನಿರ್ಧರಿಸುವ ಕಬ್ಬಿನ ದರದ ಆಧಾರದಲಿಯೇ ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳ ಸಕ್ಕರೆ ಕಾರಖಾನೆಗಳ ದರ ನಿರ್ಧಾರ ಆಗುತ್ತದೆ ಹೀಗಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಮೂರು ಜಿಲ್ಲೆಗಳ ಕಾರಖಾನೆಯಾಗಿದೆ ಎಂದರು.
ಸಕ್ಕರೆ ದರದಲ್ಲಿ ಕುಸಿತವಾಗಿದ್ದರೂ ಕೂಡ ನಮ್ಮ ಕಾರಖಾನೆ ರೈತರಿಗೆ ಉತ್ತಮ ದರ ನೀಡಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಇತರ ಎಲ್ಲ ಖಾಸಗಿ ಕಾರಖಾನೆಗಳಿಗಿಂತ ರೈತರಿಗೆ ಹೆಚ್ಚು ದರ ನೀಡುತ್ತೇವೆ ಎಂದು ಹೇಳಿದರು.
ಸಭೆಯಲ್ಲಿ ರೈತ ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಕೇಳಿದ ಲಿಖಿತ ಪ್ರಶ್ನೆಗಳಿಗೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ, ವ್ಯವಸ್ಥಾಪಕ ನಿರ್ದೇಶಕ ಜಿ.ಎಮ್.ಪಾಟೀಲ ಉತ್ತರಿಸಿದರು. ಸಭೆ ನಡುವಳಿಕೆಯನ್ನು ಕಛೇರಿ ಅಧಿಕ್ಷಕ ಸುರೇಶ ಠಕ್ಕಣ್ಣವರ ಓದಿದರು, ಮುಖ್ಯ ಲೆಕ್ಕಾಧಿಕಾರಿ ಎ.ಸಿ. ರಾಚಪ್ಪನವರ ೨೦೨೪-೨೫ ನೇ ಸಾಲಿನ ಅಂದಾಜು ಪತ್ರಿಕೆ ಓದಿ ಅನುಮೋದನೆ ಪಡೆದುಕೊಂಡರು.
ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಇತ್ತೀಚಿನ ವರ್ಷಗಳ ಅವಧಿಯಲ್ಲಿ ಅಥಣಿ ತಾಲೂಕಿನ ೫ ಸಕ್ಕರೆ ಕಾರ್ಖಾನೆಗಳು ನೀಡಿದ ದರಕ್ಕಿಂತ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚಿನ ದರ ನೀಡಲಾಗಿದೆ. ರೈತ ಹಿತ ಕಾಯುವ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಗೆ ಅಥಣಿ ತಾಲೂಕಿನ ರೈತರು ಉತ್ತಮ ಗುಣ ಮಟ್ಟದ ಕಬ್ಬನ್ನು ಪೂರೈಸುವ ಮೂಲಕ ಕಾರಖಾನೆಯ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಸಹಕರಿಸಬೇಕು