ಪ್ರತಿಭಾನ್ವೇಷಣೆಯೇ ಪ್ರತಿಭಾ ಕಾರಂಜಿಯ ಉದ್ದೇಶ
ಕೋಲಾರ,ಸೆ,೨೦-ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದ್ದು, ಮಕ್ಕಳು ಕೂಡ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಶಿಳ್ಳಂಗೆರೆ ಗ್ರಾಪಂ ಸದಸ್ಯ ವೇಣುಗೋಪಾಲ್ ಹೇಳಿದರು.
ತಾಲ್ಲೂಕಿನ ಶಿಳ್ಳೆಂಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ, ಮಕ್ಕಳ ಮೇಳ, ಕ್ರೀಡಾ ಕಾರ್ಯಕ್ರಮ ಆಯೋಜಿಸಿದೆ. ಇಲ್ಲಿ ಮಕ್ಕಳು ತಮ್ಮಲ್ಲಿರುವ ಕಲೆ, ಸಾಹಿತ್ಯ, ಜಾನಪದ ಪ್ರಾಕಾರದ ಪ್ರತಿಭೆ ತೋರಿ ಸಾಂಸ್ಕೃತಿಕವಾಗಿ ಮುಂದೆ ಬರಬೇಕು ಎಂದರು.
ಎಸ್.ಡಿ.ಎಂಸಿ ಅಧ್ಯಕ್ಷೆ ರೋಜಾಬಾಯಿ ಮಾತನಾಡಿ, ಶಾಲೆಯ ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಅನಾವರಣ ಮಾಡುವ ಮೂಲಕ ಮಕ್ಕಳು ಸರ್ವಾಂಗೀಣ ಬೆಳವಣಿಗೆ ಸಾಧಿಸಲು ಅವಕಾಶ ಕಲ್ಪಿಸಬೇಕು. ಸೋಲು, ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಹೇಳಿದರು.
ಹರಟಿ ಗ್ರಾಪಂ ಅಧ್ಯಕ್ಷ ವೆಂಕಟೇಶಪ್ಪ, ಸದಸ್ಯರಾದ ನಾರಾಯಣಪ್ಪ, ರಾಧಿಕಾ ಬಾಯಿ ಗಣೇಶ್ ಸಿಂಗ್, ಶಿಕ್ಷಕರಾದ ಎಸ್.ಮುನಿಸ್ವಾಮಿ, ರಾಜ್ ಗೋಪಾಲ್, ಉಮಾದೇವಿ, ಈರಮ್ಮ, ನೇತ್ರಾವತಿ, ಕ್ಲಸ್ಟರ್ ಮುನಿರಾಜು, ಹರಿಟಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಜಿ.ಸಿ.ಶ್ರೀನಿವಾಸ್ ಇದ್ದರು.