ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ
ಧಾರವಾಡ,ಏ11 : ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಮೇ 7 ರಂದು ಮತದಾನ ಜರುಗಲಿದ್ದು, ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದ್ದು, ಏಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ಮತ್ತು ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಧಾರವಾಡ ಲೋಕ ಸಭಾ ಮತ ಕ್ಷೇತ್ರದ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 07, 2024 ರಂದು ಮತದಾನ ನಡೆಯಲಿದ್ದು, ಜೂನ್ 04 ರಂದು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಮತ ಏಣಿಕಾ ಕೇಂದ್ರದಲ್ಲಿ ಮತ ಏಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಚುನಾವಣೆಯಲ್ಲಿ ಮತದಾನದ ದಿನದಂದು ಒಟ್ಟು ಪಿಆರ್‍ಓ- 2195, ಎಪಿಆರ್‍ಓ- 2195 ಮತ್ತು ಪಿಓ-4392 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಮಾದರಿ ನೀತಿಸಂಹಿತೆ ಜಾರಿಯಲ್ಲಿದ್ದು ಅಕ್ರಮ ವಹಿವಾಟು ತಡೆಯಲು ವಿವಿಧ ತಂಡಗಳನ್ನು ನೇಮಿಸಲಾಗಿದೆ. ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನ ಸಭಾ ಕ್ಷೇತ್ರವಾರು ಮಾದರಿ ನೀತಿ ಸಂಹಿತೆ ನೂಡಲ್ ಅಧಿಕಾರಿಗಳು 8, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು 57, ಸ್ಟ್ಯಾಟಿಕ್ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 72, ವಿಡಿಯೋ ಸರ್ವೇಲೆನ್ಸ್ ಟೀಮ್ ಅಧಿಕಾರಿಗಳು 14, ವಿಡಿಯೋ ವೀವಿಂಗ್ ಟೀಮ್ ಅಧಿಕಾರಿಗಳು 21, ಅಕೌಂಟಿಂಗ್ ಟೀಮ್ ಅಧಿಕಾರಿಗಳು 11, ಸಹಾಯಕ ಲೆಕ್ಕ ವೀಕ್ಷಕರು 10 ಸೇರಿ ಒಟ್ಟು 193 ಅಧಿಕಾರಿಗಳನ್ನು ವಿವಿಧ ತಂಡಗಳಿಗೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಧಾರವಾಡ ಲೋಕಸಭಾ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ದೇಶನಗಳಂತೆ ವಿಶೇಷ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಸಖಿ, ಯುವ ಹಾಗೂ ಥೀಮ್ ಆಧಾರಿತ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಈ ಸಲ ಲೋಕಸಭೆ ಚುನಾವಣೆಯಲ್ಲಿ ಶೇ. 75 ರಷ್ಟು ಮತದಾನ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.