ರಾಜ್ಯ ಸರ್ಕಾರ ಬೋರ್ಡ್ ಪರೀಕ್ಷೆಗೆ ಸುಪ್ರೀಂ ತಡೆ
ಸಂಜೆವಾಣಿ ನ್ಯೂಸ್
ಮೈಸೂರು: ಏ.11:- 5, 8 ಹಾಗೂ 9ನೇ ತರಗತಿ ಬೋರ್ಡ್ ಪರೀಕ್ಷೆಗೆ ಸರ್ಕಾರ ಮಾಡಿರುವ ಕಾನೂನುಬಾಹಿರ ಕ್ರಮವನ್ನು ಸುಪ್ರಿಂ ಕೋರ್ಟ್ ತಡೆ ಹಿಡಿದಿರುವುದು ಸ್ವಾಗತಾರ್ಹ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಯುಪಿಎ ಸರ್ಕಾರ 2010ರಲ್ಲಿ ಜಾರಿಗೊಳಿಸಿದ ಶಿಕ್ಷಣ ಹಕ್ಕು ಕಾಯಿದೆ ಜಾರಿಯಲ್ಲಿದ್ದು, ಮೌಲ್ಯಮಾಪನ ಮತ್ತು ಕಲಿಕಾ ಫಲಿತಾಂಶ ಕುರಿತಂತೆ ನಿಯಮ 23ರ ಅನ್ವಯ ನಿರಂತರ, ವ್ಯಾಪಕ ಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿದೆ. ಶಿಕ್ಷಣ ಹಕ್ಕು ಕಾಯ್ದೆ 30 ಮಕ್ಕಳು 8ನೇ ತರಗತಿ ಮುಗಿಯುವವರೆಗೆ ಯಾವುದೇ ಬೋರ್ಡ್ ಪರೀಕ್ಷೆ ಪಾಸ್ ಮಾಡುವ ಅಗತ್ಯ ತಳ್ಳಿಹಾಕಿದೆ. ಆದರೆ, ಸರ್ಕಾರ ಬೋರ್ಡ್ ಪರೀಕ್ಷೆ ಮಾಡಲು ಮುಂದಾಗಿದ್ದು ಸರಿಯಲ್ಲ ಎಂದರು.
ಅವ್ಯವಹಾರ ಮುಚ್ಚಿಹಾಕಲು ಯತ್ನ:
ಪರೀಕ್ಷೆ ನಡೆಸುವ, ಪ್ರಶ್ನೆ ಪತ್ರಿಕೆ ಮುದ್ರಿಸುವ ಕಾರ್ಯದಲ್ಲಿ ನಡೆದಿರುವ ಕೋಟ್ಯಂತರ ರೂಗಳ ಅವ್ಯವಹಾರ ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಪ್ರಶ್ನೆ ಪತ್ರಿಕೆಯ ಪ್ರತಿ ಪುಟಕ್ಕೂ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಇಲಾಖೆಯಲ್ಲಿ ಗುಸುಗುಸು ನಡೆಯುತ್ತಿದೆ. ಇದರಲ್ಲಿ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಬೇಕು. ತನ್ನ ಒಣ ಪ್ರತಿಷ್ಠೆ ಬಿಟ್ಟು ಮಕ್ಕಳ ಹಿತಾಸಕ್ತಿ ಗೌರವಸಿ, ಮಂಡಳಿಯ ಪರೀಕ್ಷೆಯ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಗೊಳಿಸಿ, ಶಾಲಾ ಹಂತದಲ್ಲಿ ನಡೆದಿರುವ ಮಕ್ಕಳ ನಿರಂತರ, ವ್ಯಾಪಕ ಮೌಲ್ಯಮಾಪನ ಆಧಾರದಲ್ಲಿ ಫಲಿತಾಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಸಿಲಿನಿಂದ ರೈತರು ಬವಣೆ ಪಡುತ್ತಿದ್ದಾರೆ. ಬೋರ್ ವೆಲ್ ಗಳಲ್ಲಿ ನೀರು ಬರುತ್ತಿಲ್ಲ. ಬೋರ್ ವೆಲ್ ಕೊರೆಯುವವರು ಅಡಿಗೆ 100 ರೂಗೆ ಏರಿಕೆ ಮಾಡಿದ್ದಾರೆ. ದಲ್ಲಾಳಿಗಳು ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ಸರ್ಕಾರ ದಲ್ಲಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಂವಿಧಾನ, ಪ್ರಜಾಪ್ರಭುತ್ವ ಎಂದು ಬಾಯಿಗೆ ಬಂದಂತೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಗೊತ್ತಿಲ್ಲ. ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲಿ. ಆದರೆ ಅದಕ್ಕಾಗಿ ಸಚಿವ ಸ್ಥಾನಕ್ಕೆ ರಜಾ ಹಾಕಬೇಕಿಲ್ಲ. ಕೊದಲು ರೈತರ ಸಮಸ್ಯೆಗಳನ್ನು ನಿವಾರಿಸಲಿ ಎಂದು ಒತ್ತಾಯಿಸಿದರು.
ಟಿಕೆಟ್ ಕೇಳಿದ್ದು ನಿಜ:
ನಾನು ಬಿಜೆಪಿ ಎಂಎಲ್ಸಿ. ತಾಂತ್ರಿಕವಾಗಿ ಏನೇ ಹೇಳಿದರೂ ಬಿಜೆಪಿ ಎಂಎಲ್ಸಿ ಅಲ್ಲ ಎಂದು ಹೇಳಲು ಆಗಲ್ಲ. ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿಯನ್ನೆ ಹೊಗಳಬೇಕೆಂದಿಲ್ಲ. ತಪ್ಪು ಮಾಡಿದವರು ಯಾರೇ ಅದರೂ ಅದರ ವಿರುದ್ಧ ಮಾತನಾಡುತ್ತೇನೆ. ನಾನು ಕಾಂಗ್ರೆಸ್ ಟಿಕೆಟ್ ಕೇಳಿದ್ದು ನಿಜ. ಯದುವೀರ್ ಅವರನ್ನು ಅವಿರೋಧವಾಗಿ ಗೆಲ್ಲಿಸಿ ಎಂದು ಹೇಳಿದ್ದೂ ನಿಜ. ಆದರೆ ಯದುವೀರ್ ಅವರಿಗೆ ಟಿಕೆಟ್ ಘೋಷಣೆಯಾದ ಬಳಿಕ ನನಗೆ ನೀಡಿದ್ದರೆ ನಿರಾಕರಿಸುತ್ತಿದ್ದೆ ಎಂದರು.
ಪಕ್ಷ ರಾಜಕಾರಣ ಸತ್ತು ಹೋಗಿದೆ:
ರಾಜಕಾರಣ ನಿಂತ ನೀರಲ್ಲ, ಹರಿಯುವ ಗಂಗೆ. ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗುತ್ತಿದೆ. ಜತೆಗೆ ಪಕ್ಷ ರಾಜಕಾರಣ ಸತ್ತು ಬಹಳ ವರ್ಷವಾಗಿದೆ. ಈಗ ಇರುವುದು ವ್ಯಕ್ತಿ ರಾಜಕಾರಣ. ಇಂದು ಯಾರೂ ಪಕ್ಷದ ಹೆಸರು ಹೇಳುತ್ತಿಲ್ಲ. ಬದಲಿಗೆ ವ್ಯಕ್ತಿ ರಾಜಕಾರಣದ ವೈಭವೀಕರಣವಾಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ ಎಂದರು.
ಗ್ಯಾರಂಟಿಗಳು ಮತವಾಗಿ ಪರಿವರ್ತನೆಯಾಗಲ್ಲ:
ಗ್ಯಾರಂಟಿಗಳಿಂದ ಜನರಿಗೆ ಅನುಕೂಲ ಆಗಿದೆ. ಆದರೆ, ನೂರಕ್ಕೆ ನೂರರಷ್ಟು ಮತವಾಗಿ ಪರಿವರ್ತನೆ ಆಗುತ್ತವೆ ಎನ್ನಲು ಸಾಧ್ಯವಿಲ್ಲ. ಹಿಂದೆ ದೇವರಾಜ ಅರಸು ಅವರು ಉಳುವವನನ್ನೆ ಭೂಮಿ ಒಡೆಯನ್ನಾಗಿ ಮಾಡಿ 20 ಲಕ್ಷ ಭೂಮಿ ನೀಡಿದರು. ಆದರೆ ಚುನಾವಣೆಯಲ್ಲಿ ಅವರು ಅಧಿಕಾರ ಕಳೆದುಕೊಂಡರು. ಅಂತೆಯೇ ಈ ಚುನಾವಣೆಯಲ್ಲೂ ಗ್ಯಾರಂಟಿಗಳು ಕಾಂಗ್ರೆಸ್ ಕೈ ಹಿಡಿಯುತ್ತವೆ ಎಂದು ಹೇಳಲಾಗದು ಎಂದರು.