ಫಲಿತಾಂಶದಲ್ಲಿ ಏರಿಕೆ ಸ್ಥಾನದಲ್ಲಿ ಕುಸಿತ
ಸಂಜೆವಾಣಿ ನ್ಯೂಸ್
ಮೈಸೂರು: ಏ.11:- 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮೈಸೂರು ಶೇ.83.13ರಷ್ಟು ಫಲಿತಾಂಶ ಪಡೆದು 13ರಿಂದ 17ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ಬಾರಿ ಶೇ.79.89ರಷ್ಟು ಫಲಿತಾಂಶ ಪಡೆದು 13ನೇ ಸ್ಥಾನ ಪಡೆದುಕೊಂಡಿದ್ದ ಮೈಸೂರು ಜಿಲ್ಲೆ ಈ ಬಾರಿಯ ಫಲಿತಾಂಶದಲ್ಲಿ ಸುಧಾರಿಸಿಕೊಂಡಿದ್ದು, ಶೇ.83.13ರಷ್ಟು ಫಲಿತಾಂಶ ಪಡೆದರೂ 17ನೇ ಸ್ಥಾನ ಪಡೆದು 4 ಸ್ಥಾನ ಕುಸಿತಕಂಡಿದೆ. ರಾಜ್ಯ ಮಟ್ಟದಲ್ಲಿ 10ರ ಒಳಗೆ ಸ್ಥಾನ ಪಡೆಯಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ವರ್ಷವಿಡೀ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಟಾಪ್‍ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಜಿಲ್ಲೆ ಈ ಬಾರಿಯೂ ವಿಫಲವಾಗಿದೆ.
ರಾಜ್ಯಕ್ಕೆ ದ್ವಿತೀಯ: ವಿಜ್ಞಾನ ವಿಭಾಗದಲ್ಲಿ ಕುವೆಂಪುನಗರದ ಆದಿಚುಂಚನಗಿರಿ ಪಿಯು ಕಾಲೇಜಿನ ಕೆ.ಎಚ್.ಉರ್ವಿಶ್ ಹಾಗೂ ಮೇಟಗಳ್ಳಿಯ ಆರ್‍ವಿಪಿಬಿ ಕಾಲೇಜಿನ ಜಾಹ್ನವಿ ತಲಾ 597 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಉರ್ವಿಶ್ ಪ್ರಶಾಂತ್ ಕನ್ನಡ, ಇಂಗ್ಲಿಷ್, ಭೌತವಿಜ್ಞಾನದಲ್ಲಿ 99, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವವಿಜ್ಞಾನದಲ್ಲಿ 100 ಅಂಕ ಪಡೆದಿದ್ದಾರೆ. ಜಾಹ್ನವಿ ಸಂಸ್ಕೃತ, ಗಣಿತ, ಜೀವವಿಜ್ಞಾನ ಹಾಗೂ ರಸಾಯನ ವಿಜ್ಞಾನದಲ್ಲಿ 100 ಅಂಕ, ಇಂಗ್ಲಿಷ್‍ನಲ್ಲಿ 99 ಮತ್ತು ಭೌತವಿಜ್ಞಾನದಲ್ಲಿ 98 ಅಂಕ ಗಳಿಸಿದ್ದಾರೆ. ಮಹಾರಾಣಿ ಪಿಯು ಕಾಲೇಜಿನ ಶ್ರೇಯಾ ಗಣೇಶ್ ಅಯ್ಯರ್ 5ನೇ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಗರದ ಸದ್ವಿದ್ಯಾ ಪಿಯು ಕಾಲೇಜಿನ ಸ್ವಾತಿ ಎಸ್.ಭಟ್ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದು, ವ್ಯವಹಾರಿಕ ಅಧ್ಯಯನ, ಅಕೌಂಟೆನ್ಸಿ, ಗಣಿತ ಹಾಗೂ ಸಂಸ್ಕೃತದಲ್ಲಿ 100, ಇಂಗ್ಲಿಷ್‍ನಲ್ಲಿ 96, ಸಂಖ್ಯಾಶಾಸ್ತ್ರದಲ್ಲಿ 98 ಅಂಕ ಪಡೆದಿದ್ದಾರೆ.
25566 ಮಕ್ಕಳು ಉತ್ತೀರ್ಣ: ಜಿಲ್ಲೆಯಲ್ಲಿ 30756 ವಿದ್ಯಾರ್ಥಿಗಳ ಪೈಕಿ ಹೊಸದಾಗಿ 25566 ವಿದ್ಯಾರ್ಥಿಗಳು, 1852 ಪುನರಾವರ್ತಿತ, ಖಾಸಗಿಯಾಗಿ 1268 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಟ್ಟು 25566 ಮಕ್ಕಳು ಉತ್ತೀರ್ಣರಾಗಿದ್ದಾರೆ. 5190 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ 26885 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 22579 ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 3871 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇವರಲ್ಲಿ 2987 ಮಂದಿ ಉತ್ತೀರ್ಣರಾಗಿದ್ದಾರೆ.
ಹೆಣ್ಣು ಮಕ್ಕಳೇ ಮೇಲುಗೈ: ಈ ಬಾರಿ 15568 ಬಾಲಕರು ಪರೀಕ್ಷೆ ಬರೆದಿದ್ದು, ಇವರಲ್ಲಿ 11188 ಮಂದಿ ಉತ್ತೀರ್ಣರಾಗಿ ಶೇ.71.87ರಷ್ಟು ಫಲಿತಾಂಶ ಪಡೆದಿದ್ದಾರೆ. 18308 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಇವರಲ್ಲಿ 15653 ಮಂದಿ ಉತ್ತೀರ್ಣರಾಗಿ ಶೇ.85.5ರಷ್ಟು ಶೇಕಡವಾರು ಫಲಿತಾಂಶ ಪಡೆಯುವ ಮೂಲಕ ಈ ಬಾರಿಯೂ ಹೆಣ್ಣುಮಕ್ಕಳೆ ಜಿಲ್ಲೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಷಯದ ಫಲಿತಾಂಶ ಕುಸಿತ: ಜಿಲ್ಲೆಯಲ್ಲಿ ಈ ಬಾರಿಯೂ ದ್ವಿತೀಯ ಪಿಯು ಕಲಾ ವಿಷಯದಲ್ಲಿ ಕಡಿಮೆ ಫಲಿತಾಂಶ ಬಂದಿದೆ. 6550 ವಿದ್ಯಾರ್ಥಿಗಳು ಕಲಾ ವಿಷಯ ಪರೀಕ್ಷೆ ಬರೆದಿದ್ದು, ಇವರಲ್ಲಿ ಕೇವಲ 4563 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.69.66ರಷ್ಟು ಶೇಕಡವಾರು ಫಲಿತಾಂಶ ಬಂದಿದೆ. ವಾಣಿಜ್ಯ ವಿಷಯದಲ್ಲಿ ಪರೀಕ್ಷೆ ಬರೆದಿದ್ದ 10341 ವಿದ್ಯಾರ್ಥಿಗಳಲ್ಲಿ 8706 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇಕಡವಾರು 84.19ರಷ್ಟು ಫಲಿತಾಂಶ ಬಂದಿದೆ. ಜತೆಗೆ ವಿಜ್ಞಾನ ವಿಷಯದಲ್ಲಿ 13865 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 12297 ಮಂದಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇಕಡವಾರು 88.69ರಷ್ಟು ಫಲಿತಾಂಶ ಲಭ್ಯವಾಗಿದೆ. ನಗರ ಪ್ರದೇಶದಲ್ಲಿ ಶೇ.83.98ರಷ್ಟು ಫಲಿತಾಂಶ ಲಭವಾದರೆ, ಗ್ರಾಮೀಣ ಪ್ರದೇಶದಲ್ಲಿ 77.16ರಷ್ಟು ಫಲಿತಾಂಶ ಬಂದಿದೆ.