ಮಕ್ಕಳಿಗೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ: ಹರಿಚರಣ ತಿಲಕ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.11: ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟಿದ್ದಾರೆ.
ಅವರು ತಾಲೂಕಿನ ಹೇಮಗಿರಿಯಲ್ಲಿಯಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆಯವರು ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿಂದು ಮಹತ್ತರ ಬದಲಾವಣೆಗಳಾಗುತ್ತಿವೆ. ಕೇಂದ್ರೀಯ ಪಠ್ಯ ಬೋದನಾ ಶಾಲೆಗಳ ಜೊತೆಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಅಸ್ತಿತ್ವದಲ್ಲಿದ್ದು ಏಕರೂಪ ಶಿಕ್ಷಣ ಪದ್ದತಿ ಮಾಯವಾಗಿದೆ. ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಸೇವಾ ಕ್ಷೇತ್ರವಾಗಿದ್ದ ಶಿಕ್ಷಣ ಕ್ಷೇತ್ರವನ್ನು ಇಂದು ವ್ಯಾಪಾರ ಕ್ಷೇತ್ರವನ್ನಾಗಿ ಪರಿವರ್ತಿಸಿವೆ. ಜನರ ಮುಲಭೂತ ಹಕ್ಕುಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಒತ್ತು ನೀಡುವ ಮೂಲಕ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯಿಂದ ವಿಮುಖವಾಗಿದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಬಡವರ ಮಕ್ಕಳು ಸಂಪೂರ್ಣ ಶಿಕ್ಷಣ ವಂಚಿತರಾಗುವ ಅಪಾಯಕಾರಿ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮಠಮಾನ್ಯಗಳು ಶ್ರೀ ಸಾಮಾನ್ಯರಿಗೆ ನಿಲುಕುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದ ಎಂ.ಕೆ.ಹರಿಚರಣತಿಲಕ್ ಇಂದು ಪೆÇೀಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಕಲಿಕಾ ಒತ್ತಡಗಳನ್ನು ಹಾಕುತ್ತಿದ್ದಾರೆ. ಪ್ರತಿಯೊಬ್ಬ ಪೆÇೀಷಕರು ತಮ್ಮ ಮಕ್ಕಳು ಡಾಕ್ಟರ್, ಎಂಜಿನಿಯರ್ ಆಗಬೇಕೆನ್ನುವ ಕನಸುಗಳನ್ನು ಕಾಣುತ್ತಿದ್ದಾರೆ. ಇದರಿಂದ ವಿಜ್ಞಾನ ಕಲಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದು ಕಲಾ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದ್ದಾರೆ. ಕಲಾ ಶಿಕ್ಷಣದಲ್ಲೂ ಸಾಕಷ್ಟು ಉತ್ತಮ ಅವಕಾಶಗಳಿವೆ. ಇದನ್ನು ಪೆÇೀಷಕರು ಅರ್ಥಮಾಡಿಕೊಂಡು ಮಕ್ಕಳ ಸಹಜ ಕಲಿಕೆಗೆ ಒತ್ತು ನೀಡಬೇಕೆಂದರು.
ಆಧುನಿಕ ಶಿಕ್ಷಣ ಪದ್ದತಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. ಕನಿಷ್ಠ ರಜಾ ದಿನಗಳಲ್ಲಿಯಾದರೂ ಮಕ್ಕಳು ಸಂತೋಷದಿಂದ ನಕ್ಕು ನಲಿಯುವ ವಾತಾವರಣ ಮಾಯವಾಗಿದೆ. ಮಕ್ಕಳ ಬಾಲ್ಯವನ್ನು ಕಸಿಯದಂತೆ ಬೇಸಿಗೆ ಶಿಬಿರಗಳು ಕೆಲಸ ಮಾಡಬೇಕು. ನಾಲ್ಕು ಗೋಡೆಗಳ ನಡುವೆ ಶೈಕ್ಷಣಿಕ ವ್ಯವಸ್ಥೆಯ ಸರಳುಗಳಲ್ಲಿ ಬಂಧಿಯಾಗಿರುವ ಮಕ್ಕಳಿಗೆ ಬೇಸಿಗೆ ಶಿಬಿರಗಳು ಬಿಡುಗಡೆಯ ತಾಣಗಳಾಗಿ ಪರಿವರ್ತನೆಗೊಳ್ಳಬೇಕು. ಜನಪದೀಯ ನೃತ್ಯ ಕಲೆಗಳ ಜೊತೆಗೆ ಗ್ರಾಮೀಣ ಕ್ರೀಡೆಗಳಾದ ಬುಗುರಿ, ಗೋಲಿ ಆಟ, ಮರಕೋತಿ, ಲಗೋರಿ ಮುಂತಾದ ಕ್ರೀಡೆಗಳಿಗೆ ಬೇಸಿಗೆ ಶಿಬಿರಗಳಲ್ಲಿ ಜಾಗ ದೊರಕಿಸಬೇಕು. ಕ್ರೀಡೆಗಳಿಂದ ದೈಹಿಕ ಆರೋಗ್ಯ ಉತ್ತಮಗೊಂಡರೆ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳ ಬೌದ್ದಿಕ ವಿಕಸನಕ್ಕೆ ದಾರಿಯಾಗುತ್ತದೆ. ಬೇಸಿಗೆ ಶಿಬಿರಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವಂತಿರಬೇಕೆಂದು ಎಂ.ಕೆ.ಹರಿಚರಣತಿಲಕ್ ಅಭಿಪ್ರಾಯಪಟ್ಟರು.
ಶಿಬಿರವನ್ನು ಉದ್ಘಾಟಿಸಿದ ಹಿರಿಯ ಪತ್ರಕರ್ತ ಆರ್. ಶ್ರೀನಿವಾಸ್ ಮಾತನಾಡಿ ಬೇಸಿಗೆ ಶಿಬಿರಗಳಿಂದ ಮಕ್ಕಳ ಕ್ರೀಯಾಶೀಲತೆ ಹೆಚ್ಚುತ್ತದೆಯಲ್ಲದೆ ಕಲಿಕಾ ಶಿಸ್ತು ಬೆಳೆಯುತ್ತದೆ. ಮಕ್ಕಳ ಸುಪ್ತ ಪ್ರತಿಭೆ ವಿಕಸಿಸಲು ಇದು ವೇದಿಕೆಯಾಗಲಿದೆ. ಇಂದಿನ ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ. ಮೊಬೈಲ್ ಗೀಳಿನಿಂದ ಮಕ್ಕಳನ್ನು ಹೊರತರಲು ಬೆಸಿಗೆ ಶಿಬಿರಗಳು ನೆರವಾಗಲಿವೆ ಎಂದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಆನಂದ್ ಸೇರಿದಂತೆ ಸಂಸ್ಥೆಯ ಬೋದಕ ವೃಂದ ಹಾಗೂ ಮಕ್ಕಳ ಪೆÇೀಷಕರು ಕಾರ್ಯಕ್ರಮದಲ್ಲಿದ್ದರು.