ಸೇವಾ ಕಾರ್ಯಕರ್ತರೊಂದಿಗೆ ಸಭೆ
ಮಾಲೂರು, ಏ. ೧೧: ಪ್ರಸಿದ್ದ ಯಾತ್ರಾಸ್ಥಳವಾದ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಕಾರ್‍ಯಕ್ರಮಗಳು ಏ.೧೪ ರಿಂದ ಏ.೨೩ ರವರೆಗೆ ಸಂಪ್ರದಾಯಬದ್ದವಾಗಿ ಆಚರಣೆ ಮಾಡುತ್ತಿದ್ದು, ೧೦ ದಿನಗಳ ಕಾಲ ನಾನಾ ರೀತಿಯ ಉತ್ಸವಗಳು ನಡೆಯುತ್ತಿದ್ದು, ಉತ್ಸವಗಳ ಸೇವಾಕರ್ತರನ್ನು ಕರೆಯಿಸಿ ಸಭೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಾಲಯದ ಕಾರ್‍ಯನಿರ್ವಾಹಕ ಅಧಿಕಾರಿ ಟಿ.ಸೆಲ್ವಮಣಿ ಹೇಳಿದರು.
ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಕಚೇರಿಯ ಸಭಾಂಗಣದಲ್ಲಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ಅಂಗವಾಗಿ ೧೦ ದಿನಗಳ ಕಾಲ ನಾನಾ ರೀತಿಯ ಉತ್ಸವಗಳ ಸೇವಾಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪ್ರತಿವರ್ಷ ಬ್ರಹ್ಮರಥೋತ್ಸವ ಕಾರ್‍ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಅದೇರೀತಿ ಈ ವರ್ಷವೂ ಸಹ ಬ್ರಹ್ಮರಥೋತ್ಸವ ಕಾರ್‍ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಡುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ವೈಖಾನಸಾಗಮರೀತ್ಯಾ ನವಾಹ್ನಿಕ ಪೂರ್‍ವಕ ತದಂಗವಾಗಿ ಉತ್ಸವ ಸೇವೆಗಳು ನಡೆಯಲಿವೆ. ಚೈತ್ರ ಮಾಸದ ಬ್ರಹ್ಮರಥೋತ್ಸವ ಕಾರ್‍ಯಕ್ರಮವು ಏ.೧೪ ರಿಂದ ಏ.೨೩ ರವರೆಗೆ ನಡೆಯಲಿದೆ. ಪ್ರಸ್ತುತ ವರ್ಷದ ಜಾತ್ರಾ ಮಹೋತ್ಸವದ ಸಮಯದಲ್ಲೇ ಲೋಕಸಭಾ ಚುನಾವಣೆಯು ನಡೆಯುತ್ತಿದ್ದು, ಚುನಾವಣಾ ಆಯೋಗವು ಉತ್ಸವ ಕಾರ್‍ಯಕ್ರಮಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ.
ಅದರಂತೆ ೧೦ ದಿನಗಳ ಕಾಲ ನಡೆಯುವ ಉತ್ಸವ ಕಾರ್‍ಯಕ್ರಮಗಳು ಪ್ರತಿನಿತ್ಯ ಬೆಳಗ್ಗೆ ೧೦ ಗಂಟೆಯಿಂದ ರಾತ್ರಿ ೧೦ ಗಂಟೆಯ ಒಳಗೆ ಮುಗಿಸಬೇಕು. ಸೇವಾಕರ್ತರು ಪಟಾಕಿ, ಫೇಕ್ಸಿ, ಬ್ಯಾನರ್‌ಗಳನ್ನು ನಿಯಮಿತವಾಗಿ ಬಳಸಬೇಕು. ಉಳಿದಂತೆ ಬೇರೆಯವರು ಪಟಾಕಿ, ಫೇಕ್ಸಿ, ಬ್ಯಾನರ್‌ಗಳನ್ನು ಅಳವಡಿಸಲು ಚುನಾವಣಾ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಾಟಕ ಸೇರಿದಂತೆ ಇನ್ನೀತರೆ ಮನರಂಜನಾ ಕಾರ್‍ಯಕ್ರಮಗಳನ್ನು ನಡೆಸಲು ಅನುಮತಿ ಅಗತ್ಯವಾಗಿದೆ. ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮುಖ್ಯದ್ವಾರದ ರಸ್ತೆಯಿಂದ ಒಳಗಡೆ ಬರುವ ಬರುವ ಸಮಯದಲ್ಲಿ ವಾಹನಗಳ ಸಂಚಾರದಿಂದ ತೊಂದರೆಯಾಗುತ್ತಿದ್ದು, ನೂತನವಾಗಿ ನಿರ್ಮಿಸುತ್ತಿರುವ ರಾಜಗೋಪುರದ ಸಮೀಪ ಪೊಲೀಸರು ಹೆಚ್ಚಿನ ಬಾರಿಗೇಜ್‌ಗಳನ್ನು ಅಳವಡಿಸಿ ಅನುಕೂಲ ಕಲ್ಪಿಸಲು ದೇವಾಲಯದ ವತಿಯಿಂದ ಅನುಮತಿ ನೀಡಲು ಪೊಲೀಸರಿಗೆ ಮನವಿಪತ್ರ ಸಲ್ಲಿಸುವಂತೆ ಸೇವಾಕರ್ತರು ಕಾರ್‍ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸೇವಾಕರ್ತರಾದ ಪೊಲೀಸ್ ಇನ್ಸ್‌ಪೆಕ್ಟರ್ ವಿ.ಹರೀಶ್ ರೆಡ್ಡಿ, ಕಲ್ಕೇರೆ ವೆಂಕಟೇಶ್ ಗೌಡ, ದೇವಾಲಯದ ಪ್ರಧಾನ ಅರ್ಚಕರಾದ ರವಿಸ್ವಾಮಿ, ಗೋಪಾಲಕೃಷ್ಣ ಭಾರಧ್ವಜ್, ಎನ್.ಶ್ರೀಧರ್, ಪೇಪ್ಕಾರ್ ಸಿ.ಚೆಲುವಸ್ವಾಮಿ, ಸೇವಾಕರ್ತರಾದ ಗೋವಿಂದರಾಜು, ಬಾಬುರೆಡ್ಡಿ, ಚಿಕ್ಕಮುತ್ತರಾಯರೆಡ್ಡಿ, ವಕೀಲ ವಿನೋದ್ ಗೌಡ, ಪಿ.ಶ್ರೀನಾಥ್ ಶೆಟ್ಟಿ, ಕಾಂತಾಚಾರಿ ಇನ್ನಿತರರು ಹಾಜರಿದ್ದರು.