ಶ್ರೀ ಮಲೆ ಮಹದೇಶ್ವರ ಬೆಟ್ಟ ಯುಗಾದಿ ಮಹಾರಥೋತ್ಸವ: ಲಕ್ಷಾಂತರ ಭಕ್ತರು ಭಾಗಿ
ಸಂಜೆವಾಣಿ ವಾರ್ತೆ
ಹನೂರು ಏ 11 :- ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಅಮಾವಾಸ್ಯೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಚಂದ್ರಮಾನ ಯುಗಾದಿ ಮಹಾರಥೋತ್ಸವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಪವಾಡ ಪುರುಷ ನೆಲೆಸಿರುವ ಶ್ರೀ ಮಲೆ ಮಾದಪ್ಪ ಸ್ವಾಮಿ ಸನ್ನಿಧಿಯಲ್ಲಿ ಯುಗಾದಿ ಜಾತ್ರಾ ಮಹಾ ರಥೋತ್ಸವವು ಬೆಳಿಗ್ಗೆ 7-30 ರಿಂದ 9-00 ಗಂಟೆಯವರೆಗೆ ನಡೆಯುವ ಶುಭ ಮುಹೂರ್ತದಲ್ಲಿ ಸಾಲೂರು ಬೃಹ್ಮಠಾಧ್ಯಕ್ಷರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಪ್ರಾಧಿಕಾರ ಕಾರ್ಯದರ್ಶಿ ರಘು ಅವರ ನೇತೃತ್ವದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ಯುಗಾದಿ ಜಾತ್ರಾ ಮಹೋತ್ಸ ವಕ್ಕೆ ತಮಿಳುನಾಡು ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಈಗಾಗಲೇ ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ರಂಗಮಂದಿರದ ಆವರಣ ಹಾಗೂ ಅಕ್ಕಪಕ್ಕದಲ್ಲಿ ನೆರಳಿಗಾಗಿ ವ್ಯವಸ್ಥೆಯನ್ನು ಕಲ್ಪಿಸಿರುವ ಸ್ಥಳಗಳಲ್ಲಿ ಬೀಡು ಬಿಟ್ಟಿದ್ದು ರಥೋತ್ಸವದಲ್ಲಿ ಭಾಗಿಯಾದರು.
ಶನಿವಾರದಿಂದಲೆ ಪ್ರಾರಂಭ ವಾಗಿರುವ ಯುಗಾದಿ ಜಾತ್ರಾ ಮಹೋತ್ಸವ ಭಾನುವಾರ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಪೂಜಾ ಪುನಸ್ಕಾರಗಳು ಎಣ್ಣೆ ಮಜ್ಜನ ವಿಶೇಷ ಸೇವೆ ಉತ್ಸವಗಳು ಜರುಗಿತು. ಸೋಮವಾರ ಸ್ವಾಮಿಯ ವಿವಿಧ ಸೇವೆ ಉತ್ಸವಗಳು ಜರುಗಿತು. ಭಕ್ತಾದಿಗಳಿಂದ ಪಂಜಿನ ಸೇವೆ, ಉರುಳುತ್ತೇವೆ, ಮುಡಿ ಸೇವೆ ವಿವಿಧ ಸೇವೆಗಳನ್ನು ಸಲ್ಲಿಸಿ ಧೂಪಕರ್ಪೂರ ಹಚ್ಚಿ ಭಕ್ತಿ ಪರಾಕಾಷ್ಠೆ ಮೆರೆದರು.
ಶ್ರೀ ಕ್ಷೇತ್ರದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ಮಡಿಕೆಯಲ್ಲಿ ತಣ್ಣನೆಯ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಭಕ್ತಾದಿಗಳು ಉರುಳು ಸೇವೆ ಸಲ್ಲಿಸುವಾಗ ಬಿಸಿಲಿನ ತಾಪ ತಟ್ಟದಂತೆ ದೇವಾಲಯದ ಸುತ್ತಲೂ ಟ್ಯಾಂಕರ್ ಮೂಲಕ ನೀರನ್ನು ಹಾಕಲಾಗುತ್ತಿದೆ. ಮಲೆ ಮಾದಪ್ಪನ ಸನ್ನಿಧಿಯ ಸುತ್ತಲೂ ನೆರಳಿನ ವ್ಯವಸ್ಥೆ, ದರ್ಶನದ ವ್ಯವಸ್ಥೆ ಹಾಗೂ ಪ್ರಸಾದದ ವ್ಯವಸ್ಥೆ ಹಾಗೂ ಸ್ವಚ್ಚತೆ ಹಾಗೂ ಇನ್ನಿತರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಮಲೆ ಮಹದೇಶ್ವರ ದೇವಾಲಯದ ಸುತ್ತಮುತ್ತಲೂ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು ರಾತ್ರಿ ವೇಳೆಯಲ್ಲಿ ಜಗಮಗಿಸುತ್ತಿರುವ ವಿದ್ಯುತ್ ಬೆಳಕಿಗೆ ಕಂಗೊಳಿಸಲಿದೆ. ದೇವಾಲಯದ ಪ್ರಾಂಗಣದಲ್ಲಿ ಪೆಂಡಲ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿತ್ತು.