ನಾಯಿಗಳಿಗೆ ತೋರಿದಷ್ಟು ಪ್ರೀತಿ ತಂದೆ ತಾಯಿಗೆ ಕಾಣದಿರುವುದು ಮನುಷ್ಯತ್ವವೇ ಅಲ್ಲ ಜೀವನ ಪದ್ದತಿ ಬದಲಾಯಿಸಿದ್ದರಿಂದ ಪ್ರಕೃತಿಯಲ್ಲಿ ಏರುಪೇರು: ಜಡೆಶ್ರೀ
ಕಲಬುರಗಿ:ಏ.10: ನಾಯಿಗಳಿಗೆ ತೋರಿದಷ್ಟು ಪ್ರೀತಿ, ಮಮತೆ ನಮಗೆ ಜನ್ಮ ನೀಡಿದ ತಂದೆ ತಾಯಿಗಳಿಗೆ ತೋರದಿರುವುದು ಸಮಾಜಕ್ಕೆ ಮಾರಕವಾಗಿದೆ ಎಂದು ಮೌನಯೋಗಿ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಸಮಾಧಾನದಲ್ಲಿ ಯುಗಾದಿ ಹೊಸ ವರ್ಷದ ಸಂಭ್ರಮ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.‌
ನಾವು ಒಂದೇರಡು ಮಕ್ಕಳಿಗೆ ಜನ್ಮ ನೀಡಿ ಶಿಕ್ಷಣವಂತರನ್ನಾಗಿ ಮಾಡುತ್ತಿದ್ದೇವೆಯೋ ಹೊರತು ಸಂಸ್ಕಾರಯುತವಾಗಿ ಬೆಳೆಸುತ್ತಿಲ್ಲ. ಮಕ್ಕಳು ತಮ್ಮ ಪಾಡಿಗೆ ತಾವಿದ್ದು, ತಂದೆ- ತಾಯಿಯನ್ನು ವೃದ್ದಾಶ್ರಮಕ್ಕೆ ಬಿಟ್ಟು ಕಾರಿನಲ್ಲಿ
ನಾಯಿಯನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾರೆ.‌ ಹೀಗೆ ನಡೆದುಕೊಳ್ಳುವುದು ಮನುಷ್ಯತ್ವ ಅಲ್ಲ. ಹೀಗೆ ಹತ್ತಾರು ನಿಟ್ಟಿನಲ್ಲಿ ನಾವು ನಮ್ಮ ಜೀವನ ಪದ್ದತಿ ಬದಲಾಯಿಸಿದ್ದರಿಂದಲೇ ಪ್ರಕೃತಿ ಸಹ ಮುನಿಸಿಕೊಂಡು ಬರಗಾಲ ಹಾಗೂ ವಿಪರೀತ ಮಳೆಯ ಅತಿವೃಷ್ಟಿ ನಾವು ಎದುರಿಸುವಂತಾಗುತ್ತಿದೆ ಎಂದು ಪೂಜ್ಯರು ಮಾರ್ಮಿಕವಾಗಿ ನುಡಿದರು.
ಮನುಷ್ಯರಾದ ನಾವು ದೊಡ್ಡವರಾಗಬೇಕೆಂದರೆ ಉತ್ತಮ ವಾತಾವರಣ, ಉತ್ತಮ ಗೆಳೆತನ, ಉತ್ತಮ ಮಾತುಕತೆ ಹೊಂದಿರಬೇಕು.
ಹಾಗೂ ನಿರ್ಮಲ‌ ಮನಸ್ಸು ಹೊಂದಿರಬೇಕು.‌ ನರೇಂದ್ರ ಮೋದಿ ದೇಶದ ಪ್ರಧಾನಿಯಾದರೂ ತಾಯಿ ಬಳಿ ಬಂದು ಆಗಾಗ್ಗೆ ಕೈ ತುತ್ತು ಊಟ ಮಾಡುತ್ತಿದ್ದರು. ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದರು. ಅದೇ ತೆರನಾಗಿ ತಾಯಿ ಕೂಡಾ ಮಗ ಪ್ರಧಾನಿ ಎಂಬುದಾಗಿ ತಿಳಿದುಕೊಂಡಿರಲಿಲ್ಲ. ಆಟೋದಲ್ಲಿ ಹೋಗುತ್ತಿದ್ದರು. ಅಷ್ಟೇ ಏಕೆ ಪ್ರಧಾನಮಂತ್ರಿ ಪ್ರಕೃತಿ ವಿಕೋಪ ನಿಧಿಗೆ ಕೂಡಿಟ್ಟ ಐದು ಸಾವಿರ ರೂ ದೇಣಿಗೆ ಸಲ್ಲಿಸಿರುವುದು ಜತೆಗೆ ತಾಯಿ ನಿಧನರಾದ ಸಂದರ್ಭದಲ್ಲಿ ಸರಳವಾಗಿ ಅಂತ್ಯಕ್ರಿಯೆ ನೆರವೇರಿಸಿ ಅಂದೇ ಮತ್ತೆ ಕರ್ತವ್ಯಕ್ಕೆ ತೆರಳಿರುವಂತಹ ಜತೆಗೆ ಗುಲ್ಜಾರಿ ಲಾಲ್ ನಂದಾ ಎರಡು ಸಲ ಪ್ರಧಾನಿಯಾದರೂ ಸ್ವಂತ ಮನೆ ಹೊಂದದಿರುವುದು ಹಾಗೂ ಬಾಡಿಗೆ ಮನೆಯಲ್ಲಿ ಸಹ ಇರದಂತಹ ಪರಿಸ್ಥಿತಿ ದೃಶ್ಯಗಳು ಹಾಗೂ ಮೌಲ್ಯಗಳನ್ನು ನಮ್ಮ ಹಿರಿಯರ ಹತ್ತಾರು ಮೌಲ್ಯಗಳು ನಮಗೆ ಆದರ್ಶಪ್ರಾಯ ವಾಗಬೇಕು. ಪ್ರಮುಖವಾಗಿ ನಮ್ಮ‌ ಹಿರಿಯರು ನಡೆದುಕೊಂಡ ದಾರಿ ಯಾವತ್ತು ಮರೆಯಬಾರದು ಹಾಗೂ ಆಗಾಗ್ಗೆ ನೆನಪಿಸಿಕೊಳ್ಳಬೇಕೆಂದು ಮೌನಯೋಗಿಗಳು ಹೇಳಿದರು.
ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ದೊಡ್ಡ ಸಾಧನೆ ಮಾಡಿದವರ ಹೆಸರು ನೆನಪಿಲ್ಲ. ಆದರೆ ಏನೂ ಸಾಧನೆ ಮಾಡದವರು ಹೆಸರು ರಾರಾಜಿಸುತ್ತಿದೆ ಎಂದು ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿದ ಮೌನಯೋಗಿಗಳು, ಸನಾತನ ಧರ್ಮ ಎಂಬುದಾಗಿ ಬಾಯಿ ಮಾತಲ್ಲಿ ಹೇಳುತ್ತಿದ್ದೇವೆ ಹೊರತು ಆಚರಣೆಯಲ್ಲಿ ಇಲ್ಲ.‌ ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಲಿದ್ದರೆ ಲಿಂಗಾಯತ ಸಮುದಾಯ ಸಂಘಟನೆಗೊಳ್ಳುತ್ತಿರಲಿಲ್ಲ. ಅಷ್ಟೇ ಏಕೆ ಶಿವಯೋಗ ಮಂದಿರದ ಸ್ಥಾಪಿಸದಿದ್ದರೆ ನಾಡಿನ ಮಠ ಮಂದಿರಗಳಿಗೆ ಮಹಾಸ್ವಾಮಿಗಳವರು ಸಹ ಸಮಾಜಕ್ಕೆ ದೊರಕುವುದು ಕಷ್ಟವಾಗುತ್ತಿತ್ತು ಎಂದು ವಿವರಣೆ ನೀಡಿದರು.
ಜಡೆ ಹಿರೇಮಠದ ಪೂಜ್ಯ ರಾದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾನಿಗಳು, ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆದರೆ ಒಂದು ಶಕ್ತಿ ದೊರೆಯುತ್ತದೆ.‌ ಪ್ರಮುಖವಾಗಿ ಸಮಾಧಾನವೆಂಬ ರಕ್ಷಾ ಕವಚ ಹಾನಿ ಕೊಳ್ಳ ಬೇಕೆಂದರು. ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮೂಡಿ ಸದಾಶಿವ ಮಹಾಸ್ವಾಮಿಗಳವರು ಸಹ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಧಾನದಲ್ಲಿ ಪೂಜ್ಯರು ಉಪಯೋಗಿಸಿದ ಸಾಮಾನುಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯಕ್ಕೆ ಅಡಿಗಲು ನೆರವೇರಿಸಲಾಯಿತು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಘಟಕದ ಅಧ್ಯಕ್ಷ ಶರಣು ಮೋದಿ, ಹಿರಿಯ ಆಯುರ್ವೇದ ತಜ್ಞ ಡಾ.‌ಎಚ್. ಹನುಮಂತರಾಯ ಸೇರಿದಂತೆ ಮುಂತಾದವರಿದ್ದರು.
ಶಿವಾನಂದ ಬಿರಾಜದಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು.‌ ಹೇಮಾ ಸಂದೀಪ ಹಾಗೂ ಕೃಷಿ ಅಧಿಕಾರಿ ಮಹೇಶ ನಿರೂಪಿಸಿದರು. ವರ್ಷಕ್ಕೊಮ್ಮೆ ಯುಗಾದಿ ದಿನದಂದು ಮಾತ್ರ ಮಾತನಾಡುವ ಪೂಜ್ಯರ ವಾಣಿಯ ಸಂದೇಶ ಕೇಳಲು ರಾಜ್ಯವಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.
ಬಹುಸಂಖ್ಯಾತ ರಾದ ಹಿಂದುಗಳಿಂದು ಅಲ್ಪಸಂಖ್ಯಾತರಾಗುತ್ತಿದ್ದೇವೆ.‌ ಹೀಗಾಗಿ ಒಂದೇರಡು ಮಕ್ಕಳಿಗೆ ಜನ್ಮ ನೀಡಿ ಜೀವನದ ಕೊನೆ ಘಳಿಗೆಯಲ್ಲಿ ಯಾರೂ ಇಲ್ಲದಂತೆ ಬದುಕುವುದನ್ನು ತಪ್ಪಿಸಲು ಕನಿಷ್ಟ ನಾಲ್ಕು ಮಕ್ಕಳಿಗೆ ಜನ್ಮ ನೀಡಿ.‌ ಇಬ್ಬರು ತಂದೆ- ತಾಯಿ ನೋಡಿಕೊಳ್ಳಲು, ಇನ್ನಿಬ್ಬರಲ್ಲಿ ಒಬ್ಬರು ಸಮಾಜಕ್ಕೆ ಇನ್ನೊಬ್ಬರು ದೇಶ ಸೇವೆ ( ಸೈನಿಕ) ಮಾಡಲು ಜನ್ಮ‌ನೀಡುವ ಮೂಲಕ ಸಮಾಜಾಭಿವೃದ್ದಿಗೆ ಕೈ ಜೋಡಿಸಿ. ಈ ವಿಷಯದಲ್ಲಿ ಇನ್ಮುಂದೆ ನಿರ್ಲಕ್ಷ್ಯ ಸಲ್ಲದು.