ಬರ ನಿರ್ವಹಣೆ: ಕಾರ್ಯಪಡೆ ಸಭೆಗೆ ಅನುಮತಿ ನೀಡಲುಬಿ.ಆರ್.ಪಾಟೀಲ್ ಒತ್ತಾಯ
ಕಲಬುರಗಿ,ಏ 10: ಅಳಂದ ತಾಲೂಕು ಸೇರಿದಂತೆ ರಾಜ್ಯಾದ್ಯಂತ ತೀವ್ರ ಬರ ಕಾಡುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆ ಕಾರ್ಯಪಡೆ ಸಭೆ ಮೈಗೊಂಡು ಸಮಸ್ಯೆಗೆ ಪರಿಹಾರ ಕಲ್ಪಿಸಲು ಚುನಾವಣಾ ಆಯೋಗ ಅನುಮತಿ ನೀಡಬೇಕೆಂದು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಶಾಸಕ ಬಿ.ಆರ್.ಪಾಟೀಲ್ ಒತ್ತಾಯಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಪಡೆ ಸಭೆ ಕೈಗೊಳ್ಳದಂತೆ ಆಯೋಗ ನಿಬರ್ಂಧ ಹೇರಿದೆ. ಮೇಲಾಗಿ, ಅಳಂದ ತಾಲೂಕಿನ ತಹಸೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಚುನಾವಣಾ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ. ಈಗ ಬಂದಿರುವ ತಹಸೀಲ್ದಾರ್ ಮತ್ತು ತಾಪಂ. ಇಓ ಅವರಿಗೆ ತಾಲೂಕಿನ ಗ್ರಾಮೀಣ ಭಾಗದ ಪರಿಚಯ ಇಲ್ಲ. ಮೇಲಾಗಿ, ಚುನಾವಣಾ ಕಾರ್ಯಕ್ಕಾಗಿ ಮಾತ್ರ ನಿಯೋಜನೆಗೊಂಡಿರುವ ಈ ಅಧಿಕಾರಿಗಳಿಗೆ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸುವ ಸದಾಶಯ ಸಹ ಇಲ್ಲ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆಯಾ ಕ್ಷೇತ್ರದ ಶಾಸಕರು ಕಾರ್ಯಪಡೆಯ ಅಧ್ಯಕ್ಷರು ಆಗಿರುವುದರಿಂದ ಜನರಿಗೆ ಉತ್ತರಿಸಬೇಕಾಗುತ್ತದೆ. ಅದರಲ್ಲೂ ಜನರಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆ ಅತ್ಯಂತ ಅನಿವಾರ್ಯ ಜವಾಬ್ದಾರಿಯಾಗಿದ್ದು, ಈ ಬಗ್ಗೆ ಪರಾಮರ್ಶಿಸಿ ಚುನಾವಣಾ ಆಯೋಗ ಕಾರ್ಯಪಡೆ ಸಭೆ ಕೈಗೊಳ್ಳಲು ವಿಶೇಷ ಅನುಮತಿ ನೀಡಬೆಕೆಂದು ಅವರು ಆಗ್ರಹಿಸಿದರು.