ಬಿಜೆಪಿ ವಿರುದ್ಧ ಹರಿಹಾಯ್ದ ಡಿಗ್ಗಿ
ಕಲಬುರಗಿ,ಏ.10: ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವುದಾಗಿ ಹೇಳುತ್ತಾ ವಂಚಿಸುತ್ತಲೇ ಬಂದಿರುವ ಭಾರತೀಯ ಜನತಾ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದು ಹೈದ್ರಾಬಾದ್ ಕರ್ನಾಟಕ ಕೋಲಿ ಸಮಾಜದ ಅಮೃತ ಎಚ್.ಡಿಗ್ಗಿ ಕರೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಕೋಲಿ ಸಮಾಜಕ್ಕೆ ಎಸ್ಟಿ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಿ ಬಿಜೆಪಿ ಮುಖಂಡರು ಸಮಾಜದ ಮತ ಕ್ರೋಢೀಕರಣ ಮಾಡುವಲ್ಲಿ ಯಶಸ್ಸು ಕಂಡಿದ್ದರು. ಮೇಲಾಗಿ, ಇದೇ ಆಶ್ವಾಸನೆಯ ಮೇರೆಗೆ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರಿಗೆ ಕೋಲಿ ಸಮಾಜದ ಮತದಾರರು ಮತ ನೀಡಿದ್ದರಾದರೂ, ಈವರೆಗೆ ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಬೆಳವಣಿಗೆ ಆಗಿಲ್ಲ ಎಂದು ಡಿಗ್ಗಿ ಬೇಸರ ವ್ಯಕ್ತಪಡಿಸಿದರು.
ಕೋಲಿ ಸಮಾಜಕ್ಕೆ ಎಸ್ಟಿ ಸ್ಥಾನಮಾನ ನೀಡುವ ಭರವಸೆ ನೀಡಿ ಬಾಬುರಾವ್ ಚಿಂಚನ್ಸೂರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದ ಬಿಜೆಪಿ ಮುಖಂಡರು ನಂತರ ಆ ನಿಟ್ಟಿನಲ್ಲಿ ಏನೂ ಮಾಡದೆ ಚಿಂಚನ್ಸೂರ್ ಅವರನ್ನು ಅವಮಾನಿಸಿದ್ದಾರೆ. ಈ ಮಧ್ಯೆ, ಸಮಾಜವನ್ನು ಎಸ್ಟಿ ಕ್ಯಾಟಗರಿಗೆ ಸೇರ್ಪಡೆ ಮಾಡುವ ಕಡತವನ್ನು ಹಿಂದಿರುಗಿಸಿರುವ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲವಾದರೂ, ಸಂಸದ ಉಮೇಶ್ ಜಾಧವ್ ಕೇವಲ ಸಂಸತ್ ಅಧಿವೇಶನದಲ್ಲಿ ಕೋಲಿ ಸಮಾಜಕ್ಕೆ ಎಸ್ಟಿ ಸ್ಥಾನಮಾನ ನೀಡಬೇಕೆಂದು ವಿಷಯ ಪ್ರಸ್ತಾಪಿಸಿ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕೋಲಿ ಸಮಾಜದ ಜನರನ್ನು ಮರಳು ಮಾಡಲು ಯತ್ನಿಸಿದ್ದಾರೆ. ಹೀಗಾಗಿ, ಈ ಬಾರಿ ಯಾವುದೇ ಕಾರಣಕ್ಕೂ ಕೋಲಿ ಸಮಾಜದ ಬಾಂಧವರು ಮರುಳಾಗಬಾರದು ಎಂದು ಡಿಗ್ಗಿ ಮನವಿ ಮಾಡಿದರು. ವಿಜಯಕುಮಾರ್ ಬಿ.ಹದಗಲ್, ಶಿವಶಂಕರ ಎಸ್.ಕೊಪ್ಪಿನ್, ದತ್ತು ಹೊನ್ನಳ್ಳಿ ಇದ್ದರು.