ನಾಗಠಾಣದಲ್ಲಿ ಮಹಿಳೆಯರಿಂದ ಯುಗಾದಿ ಹಬ್ಬ ಆಚರಣೆ
ವಿಜಯಪುರ,ಏ.10: ಭಾರತೀಯ ಸಂಸ್ಕøತಿಯಲ್ಲಿ ಹಬ್ಬಗಳ ಪರಂಪರೆಯೇ ಇದೆ. ಮೆರವಣಿಗೆಯ ಸಾಲಿನಂತೆ ಬರುವ ಈ ಹಬ್ಬಗಳಲ್ಲಿ ಮೊದಲನೇಯದೇ ಈ ಯುಗಾದಿ. ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಹ ಈ ಹಬ್ಬ, ಕಳಸ-ಕನ್ನಡಿ ಹೊತ್ತು ಬರುವ ಹಿರಿಯ ಮುತ್ತೈದೆಯಂತೆಯೇ ಸರಿ. ಯುಗಾದಿ ಹಬ್ಬ ಬದುಕಿನಲ್ಲಿ ಹೊಸತನವನ್ನು ತರುವ ಹಬ್ಬ. ಋತುಗಳ ರಾಜನ ಆಗಮನದ ಹಬ್ಬವಾದ ಈ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುವ ಹಬ್ಬವಾಗಿದೆ.
ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ಮನುಷ್ಯನ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯಪ್ರಜ್ಞೆಯನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ. ನಾವೆಲ್ಲರೂ ನಮ್ಮ ಬದುಕಿನಲ್ಲಿ ಸ್ವಾರ್ಥತೆಯನ್ನು ತೊರೆದು, ವಿಶಾಲಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿ ಹಬ್ಬದ ಕಳಕಳಿ ಅರ್ಥವಾಗುತ್ತದೆ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವದೇ ಯುಗಾದಿ ಹಬ್ಬದ ಆಚರಣೆಯ ಉದ್ದೇಶ.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಸವಿತಾ, ಸುರೇಖಾ, ಗಾಯತ್ರಿ, ಶ್ರೇಯಾ, ಅನುಶ್ರೀ, ಶ್ರೀನಿಧಿ, ಆದೇಶ, ಆರುಷಿ, ಸುಶಾಂತ ಅವರು ಬೇವು-ಬೆಲ್ಲದೊಂದಿಗೆ ಯುಗಾದಿ ಹಬ್ಬ ಆಚರಿಸಿದರು.