ಲಾರಿ ತಂಗುದಾಣದ 1 ಎಕರೆ ನಿವೇಶನನಿಯಮ ಮೀರಿ ಪರರಿಗೆ ಲೀಜ್: ರದ್ದು ಮಾಡಲು ಆಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.10 : ಇಲ್ಲಿನ ವಿಶ್ವೇಶ್ವರಯ್ಯ ಲಾರಿ ಟರ್ಮಿನಲ್ ನಲ್ಲಿ ಬುಡಾ ಲಾರಿ ಮಾಲೀಕರ ಸಂಘಕ್ಕೆ ನೀಡಿದ್ದ ನಿವೇಶನದಲ್ಲಿ ಒಂದು ಎಕರೆ ನಿವೇಶನವನ್ನು ನಿಯಮ ಉಲ್ಲಂಘಿಸಿ 30 ವರ್ಷಗಳ ಲೀಜ್ ಗೆ ಪರಬಾರೆ ಮಾಡಿದ್ದು. ಇದನ್ನು ರದ್ದುಗೊಳಿಸಬೇಕೆಂದು ಲಾರಿ ಮಾಲೀಕರ ಸಂಘದ ಸದಸ್ಯರು ಆಗ್ರಹಿಸಿದ್ದಾರೆ.
ಈ ಕುರಿತು ಲಾರಿ ಮಾಲೀಕರ ಸಂಘದಲ್ಲಿಯೇ  ಸುದ್ದಿಗೋಷ್ಠಿ ನಡೆಸಿದ ಟಿಪ್ಪರ್ ಅಸೋಸಿಯೇಷನ್ ಕಾರ್ಯದರ್ಶಿ ಮೆಹಬೂಬ್ ಭಾಷಾ, ಲಾರಿ ಮಾಲಿಕರಾದ ನಾಗರಾಜ್, ರಾಮ್ ಕುಮಾರ್, ಎಂ ನೀಲಕಂಠೇಶ್ವರ, ರಾಮಾಯ ಪ್ರವೀಣ್ ಕುಮಾರ್, ಶ್ರೀನಿವಾಸುಲು ರವರು ,  ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘಕ್ಕೆ 1994ರಲ್ಲಿ ಬುಡಾದಿಂದ  ಅಂದು ಅಧ್ಯಕ್ಷರಾಗಿದ್ದ ವೆಂಕಟರಾವ್ ಅವರು ಮೂರು ಎಕರೆ ನಿವೇಶನವನ್ನು  2 ಲಕ್ಷ 42 ಸಾವಿರ ರೂಪಾಯಿಗಳ ಮೊತ್ತ ಪಾವತಿಸಿ ಪಡೆದಿದ್ದರು.‌
ಈ ನಿವೇಶನವನ್ನು ಹಲವಾರು ವರ್ಷಗಳಿಂದ ಸ್ಥಳೀಯ ಮತ್ತು ಹೊರಗಿನಿಂದ ಬರುವ  ಲಾರಿಗಳನ್ನು ನಿಲ್ಲಿಸಲು ಉಪಯೋಗಿಸಲಾಗುತ್ತಿತ್ತು. ಆದರೆ ಲಾರಿ ಮಾಲೀಕರ ಸಂಘಕ್ಕೆ ಅಧ್ಯಕ್ಷರಾಗಿ ಬಂದ ಮುನ್ನ ಮತ್ತು  ಕಾರ್ಯದರ್ಶಿ ಎಂ. ಎನ್. ಬಸವರಾಜ್ ಇಬ್ಬರೂ ಸೇರಿ ಮೂರು ಎಕರೆ ಜಾಗದಲ್ಲಿ ಒಂದು  ಎಕರೆ  ಜಾಗವನ್ನು  ದೀಪ ಗಂಡ ಸುಗ್ರೀವಪ್ಪ ಮತ್ತು ಡಿ ಶರಣಕುಮಾರ್ ತಂದೆ ದೇವಿಶೆಟ್ಟಿ ಪ್ರಕಾಶ್ ಆದೋನಿ ಇವರಿಗೆ  ತಲಾ ಅರ್ಧ ಎಕರೆ  ನಿವೇಶನವನ್ನು  29 ವರ್ಷ 11 ತಿಂಗಳ ಅವಧಿಗೆ ತಲಾ  25 ಸಾವಿರ ರೂಪಾಯಿ ಬಾಡಿಗೆ ಪ್ರಕಾರ ಲೀಜ್‌ ಗೆ ನೀಡಿದ್ದಾರೆ.
ಲೀಜ್ ನೀಡುವ ಕುರಿತು ಕಾರ್ಯಕಾರಿ ಸಮಿತಿಯ ಸಭೆ ನಡೆಸದೇ,  ಸಂಘದ ಸದಸ್ಯರಿಗೆ, ಪದಾಧಿಕಾರಿಗಳಿಗೆ ಮತ್ತು ಲಾರಿ ಮಾಲಿಕರ ಗಮನಕ್ಕೆ ತರದೇ ಕೇವಲ ಮುನ್ನ ಮತ್ತು ಬಸವರಾಜ್ ಇಬ್ಬರು ಸೇರಿಕೊಂಡು ಅಧ್ಯಕ್ಷ ಮುನ್ನ ಸ್ವಂತ ನಿರ್ಣಯದಂತೆ ಲೀಜ್‌ಗೆ ನೀಡಿದ್ದಾರೆ. ಇದರಿಂದ  ಟರ್ಮಿನಲ್‌ನಲ್ಲಿ  ಲಾರಿಗಳನ್ನು ನಿಲ್ಲಿಸಲು ಸ್ಥಳದ ಸಮಸ್ಯೆಯಾಗಿದೆ.
ಅಲ್ಲದೆ ಲೀಜ್ ನೀಡಿದ ದಿನದಿಂದ ಬಾಡಿಗೆಯೆಂದು ಪ್ರತಿ ತಿಂಗಳು 50 ಸಾವಿರ ರೂಪಾಯಿಗಳ ಬಾಡಿಗೆಯನ್ನು ಪಡೆಯುತ್ತಿದ್ದು.  ಆ ಹಣವನ್ನು ಸಂಘದ ಖಾತೆಗೆ ಜಮಾ ಮಾಡದೆ.  ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳು  ಸ್ವಂತವಾಗಿ ಖರ್ಚು ಮಾಡಿರುತ್ತಾರೆ. ಇದರಿಂದ ಸಂಘಕ್ಕೆ ಸುಮಾರು 2.5 ಕೋಟಿಯಷ್ಟು ನಷ್ಟವುಂಟು ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಸಂಘಕ್ಕೆ ಸರ್ಕಾರ (ಬುಡಾ) ದಿಂದ ಮಂಜೂರು ಮಾಡುವ ಸಮಯದಲ್ಲಿ ನಿವೇಶನವನ್ನು ಕೇವಲ ಲಾರಿಗಳ ಪಾರ್ಕಿಂಗ್ ಮಾಡಲು ಮಾತ್ರ ಉಪಯೋಗಿಸಬೇಕೆಂದು ಮಂಜೂರಾತಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ ಲೀಜ್ ನೀಡಿರುವುದು  ಸಂಘದ ಬೈಲಾಗೆ ವಿರುದ್ಧವಾಗಿರುತ್ತದೆ. ಆದ್ದರಿಂದ  ಲೀಜ್  ರದ್ದುಗೊಳಿಸಿ ಒಂದು ಎಕರೆ ಜಾಗವನ್ನು ಸಂಪೂರ್ಣವಾಗಿ ಲಾರಿ ಮಾಲೀಕರ ಸಂಘಕ್ಕೆ ವಾಪಸ್ಸು ಕೊಡಿಸಬೇಕೆಂದು  ಲಾರಿ ಮಾಲಿಕರು ಡಿಸಿಯವರಿಗೆ ಒತ್ತಾಯಿಸಿದ್ದಾರೆ.
ಲೀಜ್  ವಿಷಯವಾಗಿ ಶಾಸಕರು, ಸಚಿವರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. 
ಅದಕ್ಕಾಗಿ ಈ ಕುರಿತು ನ್ಯಾಯಾಲಯದ ಮೊರೆ ಹೋಗಲಯ ಸಿದ್ದರಿರುವುದಾಗಿ ಹೇಳಿದ್ದಾರೆ.