ಸಾಮಾಜಿಕ ಸುಧಾರಣೆಗೆ ಅಲ್ಲಮಪ್ರಭುಗಳ ಕೊಡುಗೆ ಅನನ್ಯ
ಕಲಬುರಗಿ:ಏ.10: ಪ್ರಸ್ತುತ ದಿನಗಳಲ್ಲಿಯೂ ಕೂಡಾ ಕಂಡು ಬರುತ್ತಿರುವ ಜಾತಿಯತೆ, ಮೂಢನಂಬಿಕೆ, ಕಂದಾಚಾರ, ಅಂಧಶೃದ್ಧೆಯಂತಹ ಮುಂತಾದ ಸಾಮಾಜಿಕ ಸಮಸ್ಯೆಗಳ ನಿರ್ಮೂಲನೆಗೆ ಬಸವಣ್ಣನವರ ಜೊತೆಗೂಡಿ 950 ವರ್ಷಗಳ ಹಿಂದೆಯೇ ಹೋರಾಡಿದ, ಸಾಮಾಜಿಕ ಸಮಾನತೆಯ ನಿರ್ಮಾಣಕ್ಕೆ ಶ್ರಮಿಸಿದ ಶರಣ ಅಲ್ಲಮಪ್ರಭು ಅವರ ಕೊಡುಗೆ ತುಂಬಾ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಡಬರಾಬಾದ ಕ್ರಾಸ್ ಸಮೀಪವಿರುವ ಪ್ರಭುದೇವ ನಗರದಲ್ಲಿ ಬಡಾವಣೆ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಜರುಗಿದ ‘ಶರಣ ಅಲ್ಲಮಪ್ರಭುದೇವರ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ವಿಶ್ವದ ಪ್ರಥಮ ಸಂಸತ್ತೆಂದು ಕರೆಯಲ್ಪಡುವ ‘ಅನುಭವ ಮಂಟಪ’ದ ಅಧ್ಯಕ್ಷರಾಗಿ ಸಕಲ ಜಾತಿ, ಧರ್ಮ, ಜನಾಂಗದವರಿಗೆ ಸಮಾನವಾದ ಅವಕಾಶಗಳನ್ನು ಒದಗಿಸಿಕೊಟ್ಟು, ಸಮ-ಸಮಾಜ ನಿರ್ಮಾಣಕ್ಕೆ ಸಾಕಷ್ಟು ಪ್ರಯತ್ನಿಸಿದರು. ವಚನಕಾರರ ಜೀವನ ಸಿದ್ಧಾಂತದ ಸಾರವನ್ನು ತಮ್ಮ ಇರುವಿನಲ್ಲಿರಿಸಿಕೊಂಡು ಶರಣ ಮಾರ್ಗಕ್ಕೆ ಗುರುವಾದರು. ಅಪಾರ ಜ್ಞಾನಿಗಳಾದ ಅವರು, ತಮ್ಮ ಅನುಭದಿಂದ ಸಾಮಾಜಿಕ ಕಳಕಳಿಯುಳ್ಳ ಅನೇಕ ವಚನಗಳನ್ನು ರಚಿಸಿದ್ದಾರೆ. ‘ಗುಹೇಶ್ವರಾ’ ಎಂಬ ಅಂಕಿತನಾಮದೊಂದಿಗೆ ರೂಪುಗೊಂಡ ವಚನಗಳು, ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಶರಣ ಚಿಂತಕ ಡಾ.ರಾಜಶೇಖರ ಪಾಟೀಲ ಹೆಬಳಿ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಎಲ್ಲರು ಅಧ್ಯಯನ ಮಾಡಿ, ಅವುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಸಿದ್ದಾರೂಢ ಮಠದ ಪೂಜ್ಯ ಬ್ರಹ್ಮಾನಂದ ಸ್ವಾಮೀಜಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಬಡಾವಣೆಯ ಪಂಡಿತರಾವ ಪಾಟೀಲ, ಮಂಜುನಾಥ ಅಂಬಾಜಿ, ಚನ್ನಬಸಪ್ಪ ಕುಂಬಾರ, ಶರಣು ವಡಗೇರಿ, ಪ್ರಭುಲಿಂಗ ಪಾಟೀಲ, ಬಸವರಾಜ ಧನಪಾಲ್, ಆದರ್ಶ ಪಾಟೀಲ, ಪ್ರೀತಮ ಪಾಟೀಲ, ಪ್ರಭಾವತಿ ಕುಂಬಾರ, ಮಟಿವಾಳಪ್ಪ ಐಮುಳಿ ಸೇರಿದಂತೆ ಇನ್ನಿತರರು ಇದ್ದರು. ಬಾಲಕ ಪ್ರತೀಕ ಪಾಟೀಲ ಅಲ್ಲಮಪ್ರಭುದೇವರ ವಚನಗಳನ್ನು ಹಾಡಿದನು.