ರಾಜ್ಯ ಸರ್ಕಾರದ ಬೊಕ್ಕಸದಿಂದ ರೈತರಿಗೆ ಬರದ ಹಣ ಬಿಡುಗಡೆಯಾಗಲಿ
ಹುಬ್ಬಳ್ಳಿ,ಏ.10: ಸದ್ಯ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಪರಿಹಾರದ ಹಣ ಬಿಡುಗಡೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಹೋಗಿರುವುದು ರಾಜಕೀಯ ಪ್ರೇರಿತ ಎಂದು ನುಡಿದರು.
ರಾಜ್ಯದ ನೈಜ ಸ್ಥಿತಿಯನ್ನು ಈಗಿನ ಸರ್ಕಾರ ಹೇಳಿಕೊಳ್ಳಲಿಲ್ಲ.
ಆದ್ದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರದತ್ತಲೇ ಬೆರಳು ತೋರಿಸಿದ ಅವರು, ಯು.ಪಿ.ಎ ಸರ್ಕಾರ ವಿದ್ದಾಗ 8-10 ತಿಂಗಳ ನಂತರ ಪರಿಹಾರದ ಹಣ ಬಿಡುಗಡೆಯಾಗಿದೆ ಸದ್ಯ ರೈತರಿಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.
ರೈತರ ಕುರಿತು ಕಾಳಜಿ ಇಲ್ಲದ ರೈತ ವಿರೋಧಿ ಸರ್ಕಾರವಿದು ಎಂದು ಅವರು ಕುಟುಕಿದರು.
ಕಾಂಗ್ರೆಸ್‍ನ 25 ಗ್ಯಾರಂಟಿಗಳ ಘೋಷಣೆ ವಿಷಯ ಕುರಿತಂತೆ ಪ್ರತಿಕ್ರಿಯಿಸುತ್ತ, ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡದೇ ಅಧಿಕಾರಕ್ಕೆ ಹೇಗೆ ಬರುತ್ತದೆ? ಎಂದು ಪ್ರಶ್ನಿಸಿದ ಅವರು, ಮೊದಲು ಕಾಂಗ್ರೆಸ್ 543 ಸ್ಥಾನಗಳಲ್ಲಿ ಸ್ಪರ್ಧಿಸಲಿ ನಂತರ ಇಂಥ ಆಶ್ವಾಸನೆಗಳನ್ನು ಕೊಡಲಿ ಎಂದು ಟಾಂಗ್ ನೀಡಿದರು,
ಜನರಿಗೆ ಅಪ್ಪಟ ಸುಳ್ಳುಗಳನ್ನು ಹೇಳುತ್ತ ಒಂದಿಷ್ಟು ಸ್ಥಾನಗಳಿಗಾಗಿ ಕಾಂಗ್ರೆಸ್‍ನವರು ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.