ಸಾಲ ಪಡೆದು ವಂಚನೆ ಮಹಿಳೆ ಸೇರಿ ಇಬ್ಬರ ಬಂಧನ
ಬೆಂಗಳೂರು, ಏ.೧೦-ಸಾರ್ವಜನಿಕರುಗಳ ಹೆಸರುಗಳಲ್ಲಿ ಫೈನಾನ್ಸ್‌ಗಳಲ್ಲಿ ಸಾಲ ಪಡೆದುಕೊಂಡು ವಂಚಿಸುತ್ತಿದ್ದ ಖತರ್ನಾಕ್ ಮಹಿಳೆ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಮಾಗಡಿರಸ್ತೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಲಕ್ಷ್ಮೀಕಾಂತನಗರದ ನಂದಿನಿ(೪೨) ವಿಶ್ವನಿಡಂ ಅಂಚೆ ಗಿಡ್ಡದಕೊಣಿನಹಳ್ಳಿಯ ಮಂಜುನಾಥ (೩೫) ಬಂಧಿತ ಆರೋಪಿಗಳಾಗಿದ್ದು ಇಬ್ಬರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ.
ಕಳೆದ ಮಾ.೧೧ರಂದು ಕೆ.ಪಿ.ಅಗ್ರಹಾರದ ಶೈಲಾಶ್ರೀ ಆರ್.ಕೆ. ಅವರು ದೂರು ನೀಡಿ ಆರೋಪಿಗಳಾದ ನಂದಿನಿ, ಯೋಗೇಶ್, ಕೀರ್ತನಾ, ಪ್ರಶಾಂತ, ತ್ರಿವೇಣಿ, ಮಂಜುನಾಥ, ಶ್ವೇತಾಗೌಡ, ಮೋಹನ್ ಗೌಡ, ಸಂತೋಷ್, ಬ್ಯಾಂಕ್ ಅಧಿಕಾರಿಗಳು ಮತ್ತು ಇತರರುಗಳು ತನ್ನ ಹೆಸರಿನಲ್ಲಿ ಹಿಂದೂಪಾ ಹೌಸಿಂಗ್ ಪೈನಾನ್ಸ್ ನಲ್ಲಿ ೪೫ಲಕ್ಷ ಸಾಲ, ಪಿರಮಲ್ ಹೌಸಿಂಗ್ ಫೈನಾನ್ಸ್ ನಲ್ಲಿ ೫೮,೧೧,೯೨೧/- ಸಾಲ ಮತ್ತು ಇಕ್ಟೇಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ೨೦ಲಕ್ಷ ಹಣ ಸಾಲ ಪಡೆದುಕೊಂಡು ಪಿರ್ಯಾದುದಾರರಿಗೆ ನಂಬಿಸಿ ಲೋನ್ ಮಾಡಿಸಲು ಒಟ್ಟು ೮೦ ಲಕ್ಷ ಹಣವನ್ನು ಪಡೆದುಕೊಂಡು ದೂರುದಾರರ ಹೆಸರಿನಲ್ಲಿ ಮಾಡಿಸಿರುವ ಲೋನ್ ಹಣ ಮತ್ತು ದೂರುದಾರರು ಕೊಟ್ಟಿರುವ ಹಣವನ್ನು ಸಹ ವಾಪಸ್ಸು ಕೊಡದೇ ವಂಚನೆ ಮಾಡಿದ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಈ ಸಂಬಂಧ ತನಿಖೆಯನ್ನು ಮುಂದುವರೆಸಿ ಆರೋಪಿಗಳು ಪಿರ್ಯಾದುದಾರರಿಗೆ ನಂಬಿಸಿ ಪಡೆದುಕೊಂಡಿದ್ದ ರೂ.೪ ಲಕ್ಷ ಮೌಲ್ಯದ ಕಾರು, ಮೊದಲ ಆರೋಪಿತೆಯು ಲೋನ್ ಹಣದಲ್ಲಿ ಖರೀದಿಸಿಕೊಂಡಿದ್ದ ಸೈಟ್ ದಾಖಲಾತಿಗಳನ್ನು ಅಮಾನತುಪಡಿಸಿಕೊಳ್ಳಲಾಗಿದ್ದು, ಉಳಿದ ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿರುತ್ತಾರೆ ಎಂದರು.