ರಸ್ತೆ ಅಪಘಾತ: ಹೆಲ್ಮೆಟ್ ಧರಿಸದ ವಿದ್ಯಾರ್ಥಿಗಳಿಬ್ಬರ ಸಾವು
ಬೆಂಗಳೂರು, ಏ.೧೦- ವೇಗವಾಗಿ ಬಂದ ಟಾಟಾ ಏಸ್ ಬೈಕ್ ಗೆ ಡಿಕ್ಕಿ ಹೊಡೆದು ಹೆಲ್ಮೆಟ್ ಧರಿಸದ ಇಬ್ಬರು ಯುವಕರು ಸಾವನ್ನಪ್ಪಿ ಮತ್ತೋರ್ವ ಗಾಯಗೊಂಡಿರುವ ದುರ್ಘಟನೆ ನಿನ್ನೆ ರಾತ್ರಿ ಆಂಧ್ರಹಳ್ಳಿ ಮುಖ್ಯರಸ್ತೆಯ ಬಳಿ ನಡೆದಿದೆ.
ಫಾರೂಕ್(೧೮)ಹಾಗೂ ಅಬ್ರಾರ್ ಅಹಮದ್ (೧೮) ಮೃತಪಟ್ಟವರು,ಟಾಟಾ ಏಸ್ ಚಾಲಕನ ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಈ ದುರ್ಘಟನೆಗೆ ಕಾರಣವಾಗಿದೆ.
ಹೆಗ್ಗನಹಳ್ಳಿ ಬಳಿ ಫಾರೂಕ್ ಮತ್ತು ಅಬ್ರಹಾಂ ಸೇರಿ ಮೂವರು ಒಂದೇ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದಾಗ ರಾತ್ರಿ ೧೧ರ ವೇಳೆ ವೇಗವಾಗಿ ಬಂದ ಟಾಟಾ ಏಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಫಾರೂಕ್ ಹಾಗೂ ಅಬ್ರಾರ್ ಅಹಮದ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮುಂಜಾನೆ ಮೃತಪಟ್ಟಿದ್ದಾರೆ.
ಮತ್ತೊಬ್ಬ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ,
ಮೃತ ಇಬ್ಬರು ಯುವಕರು ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ರಂಜಾನ್ ಉಪವಾಸ ಮುಗಿಸಿ ತಂದೆ ಬಳಿ ಹಣ ತೆಗೆದುಕೊಂಡು ಚಪ್ಪಲಿ ಖರೀದಿಸಲು ಬಂದಾಗ ದುರಂತ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣವೇ ಪೀಣ್ಯ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಪರಾರಿಯಾಗಿರುವ ಟಾಟಾ ಏಸ್ ಚಾಲಕನನ್ನು ಬಂಧನಕ್ಕೆ ಶೋಧ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಿರಿಗೌರಿ ತಿಳಿಸಿದ್ದಾರೆ.