೧೬೦೦ ಜಿಲೆಟನ್ ಕಡ್ಡಿಗಳ ವಶ
ಮುಳಬಾಗಿಲು,ಏ,೧೦- ತಾಲ್ಲೂಕಿನ ಕೆ.ಬೈಯಪಹಳ್ಳಿ ಚುನಾವಣಾ ಚೆಕ್ ಪೋಸ್ಟ್ ತನಿಖಾ ಠಾಣೆಯಲ್ಲಿ ಕಲ್ಲು ಬಂಡೆಗಳನ್ನು ಸಿಡಿಸಲು ಸಾಗಿಸುತ್ತಿದ್ದ ವಸ್ತುಗಳನ್ನು ಚೆಕ್ ಪೋಸ್ಟ್‌ನ ಚುನಾವಣಾ ತನಿಖಾ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ನೆರೆ ರಾಜ್ಯವಾದ ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಆಸೀಫ್ ಹಜರತ್ ಉಲ್ಲಾ ಎಂಬ ವ್ಯಕ್ತಿ ಕಾರು ಸಂಖ್ಯೆ ಎಪಿ ೩೧,ಬಿಬಿ ೧೧೭೭ ಎಂಬ ಸಂಖ್ಯೆಯ ಕಾರಿನಲ್ಲಿ ೧೬೦೦ ಜಿಲೆಟನ್ ಕಡ್ಡಿಗಳನ್ನು, ೭ ವಿದ್ಯುತ್ ತಂತಿಗಳ ಬಾಕ್ಸುಗಳನ್ನು ಹಾಗೂ ೬ ಕಟ್ಟು ಡೆಟರ್ನೈಟ್ ಬಾಕ್ಸುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಬೈಯಪಹಳ್ಳಿ ತನಿಖಾ ಠಾಣೆಯಲ್ಲಿ ಎಂದಿನಂತೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಸ್ವಿಫ್ಟ್ ಕಾರನ್ನು ಪರಿಶೀಲನೆ ಮಾಡಿದಾಗ ಈ ವಸ್ತುಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಜಿಲೆಟನ್ ಮತ್ತಿತರ ವಸ್ತುಗಳನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಅರ್ಜುನ್ ಎಸ್.ಆರ್.ಗೌಡ ತಿಳಿಸಿದರು.
ಚುನಾವಣಾ ತನಿಖಾ ಠಾಣೆಯಲ್ಲಿ ಡಿ.ಎನ್.ಗೋಪಾಲ ಕೃಷ್ಣ, ವಿಶ್ವನಾಥ್, ಸುಬ್ರಮಣಿ ಹಾಗೂ ಹುಸೇನ್ ಎಂಬುವವರು ಕರ್ತವ್ಯದಲ್ಲಿದ್ದರು.