ಮಹದಾಯಿ ಯೋಜನೆ ಅನುಷ್ಠಾನಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಹುಬ್ಬಳ್ಳಿ: ಸೆ.20:– ಮಹದಾಯಿ ಯೋಜನೆ ಅನುಷ್ಠಾನ ಮಾಡುವ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಗದಗ ಜಿಲ್ಲೆಯ ನರಗುಂದದಿಂದ ಗದಗ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.
ಗದಗ ಜಿಲ್ಲೆಯ ನರಗುಂದಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯ ಚೆನ್ನಮ್ಮ ವೃತದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೂರ್ತಿಗೆ ತಮ್ಮ ಸಂಘಟನೆಯ ಪ್ರಮುಖರು ಸೇರಿ ಕಾರ್ಯಕರ್ತರೊಂದಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಹದಾಯಿ ಯೋಜನೆಯಗಾಗಿ ಈ ಭಾಗದ ಅನ್ನದಾತರು ಸುಮಾರು ಐದು ದಶಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ನಿದ್ದೆಯಲ್ಲಿರೋ ಸರ್ಕಾರಗಳಿಗೆ ಅನ್ನದಾತರ ಹಾಗೂ ಈ ಭಾಗದ ಜನರ ಕೂಗು ಕೇಳುತ್ತಿಲ್ಲ. ಹಾಗಾಗಿ ನಾವು ಕೂಡಾ ಮಹದಾಯಿ ಹೋರಾಟಕ್ಕೆ ಅನ್ನದಾತರೊಂದಿಗೆ ಕೈ ಜೋಡಿಸುವ ನಿಟ್ಟಿನಲ್ಲಿ ಗದಗ ಜಿಲ್ಲಾ ಕಚೇರಿಯವರೆಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಶೀಘ್ರ ಕ್ರಮ ಕೈಗೊಳ್ಳಲು ಗದಗ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಇನ್ನೂ ಮಹದಾಯಿ ಯೋಜನೆ ಅನುಷ್ಠಾನದ ಕರವೇ ಪ್ರವೀಣ್ ಶೆಟ್ಟಿ ಬಣದ ಹೋರಾಟಕ್ಕೆ 50ಕ್ಕೂ ಹೆಚ್ಚು ಅಟೋಗಳು ಸಾಥ್ ನೀಡಿ, ನರಗುಂದದ ಕಡೆ ತೆರಳಿದವು.