ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆದ್ಯತೆ ಮೇರೆಗೆ ಚರ್ಚೆ
ಕೋಲಾರ, ಸೆ,೨೦-ಕೆಡಿಪಿ ಸಭೆಯು, ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಧ್ಯತೆ ಮೇಲೆ ಚರ್ಚೆ ಆಗಬೇಕು. ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೆರುವುದಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಕಳಕಳಿ ಇರಬೇಕು. ಅಧಿಕಾರಿಗಳು ಜವಾಬ್ದರಿಯಿಂದ ಸಭೆಗೆ ಸರಿಯಾದ ಮಾಹಿತಿ ಮತ್ತು ಉತ್ತರ ನೀಡಬೇಕೆಂದು ಸಚಿವ ಬಿ. ಎಸ್. ಸುರೇಶ್ ಅವರು ಎಚ್ಚರಿಕೆ ನೀಡಿದರು.
ಅವರು ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಜೂನ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೃಷಿ, ಮಾರುಕಟ್ಟೆ, ತೋಟಗಾರಿಕೆ, ರೇಷ್ಮೆ,ಪಶುಪಾಲನಾ, ನೀರಾವರಿ ಇಲಾಖೆಗಳ ಅಧಿಕಾರಿಗಳು ಕೆಡಿಪಿ ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ವಾಸ್ತವಿಕ ವರದಿ ನೀಡುವದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಲೋಕೋಪಯೋಗಿ, ನೀರಾವರಿ ಮತ್ತು ಇತರ ಪ್ರಮುಖ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಚುರುಕುಗೊಳಿಸಿ ಎಂದು ಸಚಿವರು ಸೂಚಿಸಿದರು.ಜಿಲ್ಲೆಯಲ್ಲಿ ಜಲ್ ಜೀವನ ಮಿಷನ್ ಯೋಜನೆ ತೃಪ್ತಿಕರವಾಗಿ ಅನುಷಾನಗೊಳ್ಳುತ್ತಿಲ್ಲ. ನಿಗದಿತ ಅವಧಿಯಲ್ಲಿ ಯೋಜನೆ ಮುಗಿಸದಿದ್ದರೆ ಮತ್ತು ಪ್ರತಿ ಹಂತದ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.
ಜಿಲ್ಲೆಯ ಶಾಸಕರ ಅಧ್ಯಕ್ಷತೆಯ ಫಲಾನುಭವಿ ಆಯ್ಕೆಯ ವಿವಿಧ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದರು.ಅಗತ್ಯ ಗೊಬ್ಬರ, ಬೀಜ ಇದೆ: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ ಮಾತನಾಡಿ, ಈ ಮಾಹೆಯಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುತ್ತಿದೆ. ಮುಂದಿನ ೧ ತಿಂಗಳು ನಿರೀಕ್ಷಿಸಿ ಮಳೆ ಬಾರದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಜಿಲ್ಲೆಯಲ್ಲಿ ರಾಗಿ ಬಿತ್ತನೆ ನಡೆದಿದ್ದು ಬೆಳೆ ಕಟಾವಿಗೆ ಬಂದಿವೆ ಎಂದು ಸಭೆಗೆ ತಿಳಿಸಿದರು. ಅಗತ್ಯ ಬೀಜ, ರಸಗೊಬ್ಬರ ದಾಸ್ತಾನು ಇದೆ ಎಂದು ಅವರು ಹೇಳಿದರು.
ಪಶುಪಾಲನೆ ಇಲಾಖೆ ಪ್ರಗತಿ: ಉಪ ನಿರ್ದೇಶಕ ಡಾ. ಗಂಗಾತುಳಸಿರಾಮಯ್ಯ ಮಾತನಾಡಿ, ಇಲಾಖೆ ಯೋಜನೆಗಳು ಪ್ರಗತಿಯಲ್ಲಿವೆ. ಪಶುಪಾಲನೆ ಹೆಚ್ಚಳಕ್ಕೆ ಅಗತ್ಯ ಜನಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.
ಜಲ ಜೀವನ ಮಿಷನ್: ಜಲ್ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಗ್ರಾಮಗಳಲ್ಲಿ ನೀರು ಸರಬರಾಜು ವ್ಯವಸ್ಥೆಯನ್ನು ಆಯಾ ಗ್ರಾಮ ಪಂಚಾಯತಿಗಳಿಗೆ ವಹಿಸಲಾಗಿದೆ. ಉಳಿದ ಗ್ರಾಮ ಪಂಚಾಯತಗಳಿಗೆ ನೀರು ಸರಬರಾಜು ವ್ಯವಸ್ಥೆ ವಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾತನಾಡಿ, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರಕಾರಿ ಜಮೀನುಗಳನ್ನು ಗುರುತಿಸಿ ಅವುಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಕೆರೆ, ಗೋಮಾಳ ಅತಿಕ್ರಮಣ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಜಲ-ಜೀವನ್ ಮಿಷನ್: ಸರ್ಕಾರದ ಮಹತ್ವಕಾಂಕ್ಷಿ ಯೋಚನೆಯಾಗಿದ್ದು, ಈ ಯೋಜನೆಯಡಿ ೧೩೬೫ ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು, ಪ್ರತಿಯೊಂದು ಮನೆಗಳಿಗೂ ಶೀಘ್ರವಾಗಿ ನಲ್ಲಿ ನೀರು ಸಂಪರ್ಕ ನೀಡಬೇಕೆಂದು ಸೂಚಿಸಿದರು.
ಸಂಸದರಾದ ಮಲ್ಲೇಶಬಾಬು, ಕೋಲಾರ ಶಾಸಕರಾದ ಕೊತ್ತೂರು. ಜಿ.ಮಂಜುನಾಥ್, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲಕುಮಾರ್, ಗ್ಯಾರೆಂಟಿಗಳ ಅನುಷ್ಠನಾ ಸಮಿತಿ ಅಧ್ಯಕ್ಷ ಹೆಚ್.ಎಂ,ರೇವಣ್ಣ, ಜಿಲ್ಲಾ ಪೊಲೀಸ್ ವರಿಷಧಿಕಾರಿ ಬಿ.ನಿಖಿಲ್, ಕೆಜಿಎಫ್ ಪೊಲೀಸ್ ವರಿಷಧಿಕಾರಿ ಶಾಂತರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಕೆ.ಡಿ.ಪಿ ಸದಸ್ಯ ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.