ಐನಾಪುರ ಏತ ನೀರಾವರಿ; ಸಿ.ಎಂ.ಗೆ ಶಿವಾನಂದ ಪಾಟೀಲ್ ಮನವಿ
ಚಿಂಚೋಳಿ:ಸೆ.೨೦: ತಾಲ್ಲೂಕಿನ ಐನಾಪುರ ಗ್ರಾಮದಲ್ಲಿನ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಕಳೆದ ೧೭ ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದು,ತಾವು ಆದಷ್ಟು ಬೇಗ ಈ ಏತ ನೀರಾವರಿ ಯೋಜನೆಯನ್ನು ಮಂಜೂರುಗೊಳಿಸಬೇಕೆAದು ಏತ ನೀರಾವರಿ ಯೋಜನೆ ಅಭಿವೃದ್ಧಿಯ ಹೋರಾಟ ಸಮಿತಿಯ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.
ಕಲಬುರ್ಗಿಯಲ್ಲಿ ನಡೆದ ೧೯ನೇ ಸಚಿವ ಸಂಪುಟದ ಸಭೆಗೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಶಿವಾನಂದ ಮಾಲಿ ಪಾಟೀಲ್, ಈಗಾಗಲೇ ಮುಲ್ಲಾಮರಿ ಯೋಜನೆಯ ಐನಾಪುರ ಏತ ನೀರಾವರಿಗೆ ಕಾಂಗ್ರೇಸ್ ಸರ್ಕಾರದಲ್ಲಿ ೧೦.೦೬ ಕೋಟಿ ರೂಪಾಯಿಗಳ ಅನುಮೋದನೆಯನ್ನು ನೀಡಲಾಗಿದ್ದು, ಆದಷ್ಟು ಬೇಗ ನೀರಾವರಿ ಯೋಜನೆಗೆ ಚಾಲನೆ ನೀಡಬೇಕೆಂದು ಮಾಡಿದ್ದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಿ.ಎಂ. ಸಿದ್ದರಾಮಯ್ಯ,ಚಿಂಚೋಳಿ ತಾಲ್ಲೂಕಿನ ರೈತರ ಬಗೆಗೆ ನನಗೆ ಅಪಾರವಾದಂತಹ ಗೌರವ ಮತ್ತು ಕಾಳಜಿಯಿದೆ.ಮುಂಬರುವ ದಿನಗಳಲ್ಲಿ ನೀರಾವರಿ ಯೋಜನೆಗೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಸಿ.ಎಂ. ಸಿದ್ದರಾಮಯ್ಯನವರು ಭರವಸೆಯನ್ನು ನೀಡಿದ್ದಾರೆ. ಈ ಸಂದರ್ಭಕ್ಕೆ ನಮ್ಮ ಗ್ರಾಮದ ಯುವ ಮುಖಂಡ ಮೋಹನ್ ಮೇಲ್ಕೇರಿ ಐನಾಪುರ ಕೂಡ ಜೊತೆಗಿದ್ದು ಇದಕ್ಕೆ ಸಾಕ್ಷಿಯಾಗಿದ್ದರು ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.