ಬಸ್ ನಲ್ಲಿ ಸಂಚರಿಸಿ ಮಹಿಳೆಯರೊಂದಿಗೆ ಪುಷ್ಪ ಅಮರನಾಥ್ ಸಂವಾದ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.20:- ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನ ಬಳಗೊಳಿಸುವ ಸಲುವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಮೈಸೂರಿನ ಕೇಂದ್ರಿಯ ಬಸ್ ನಿಲ್ದಾಣದಿಂದ ಮಂಡ್ಯವರೆಗೂ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತೆರಳಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಿದರು.
ಈ ವೇಳೆ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣಕ್ಕೆ ಆಗಮಿಸಿದ ಮಹಿಳಾ ಪ್ರಯಾಣಿಕರಿಗೆ ಸಿಹಿ ವಿತರಣೆ ಮಾಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಬಸ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಮಾಡುವ ಅನುಕೂಲ ಮಾಡಿದೆ. ನಾನು ಕೂಡ ಶಕ್ತಿ ಯೋಜನೆಯನ್ನ ಅಭಿನಂದಿಸುತ್ತೇನೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಎಂಟು ತಿಂಗಳು ಕಳೆದಿದೆ. ಮಹಿಳೆಯರ ಬಳಿಗೆ ತೆರಳಿ ನಾನು ಅಭಿಪ್ರಾಯ ಸಂಗ್ರಹಿಸಿದ್ದೇನೆಂದರು.
ಎಲ್ಲಾ ಮಹಿಳೆಯರು ಖುಷಿಯಿಂದ ಶಕ್ತಿ ಯೋಜನೆಯನ್ನ ಉಪಯೋಗಿಸುತ್ತಿದ್ದಾರೆ. ಮಹಿಳೆಯರು ತವರು ಮನೆ ಸೇರಿ ಬೇರೆ ಬೇರೆ ಕಡೆ ಪ್ರಯಾಣ ಮಾಡುತ್ತಿದ್ದಾರೆ. ಬಡವರು ಮತ್ತು ಶ್ರೀಮಂತರು ಎಲ್ಲರಿಗೂ ಈ ಯೋಜನೆ ಒಂದು ಶಕ್ತಿಯಾಗಿದೆ. ಸಿದ್ದರಾಮಯ್ಯ ರವರ ಸರಕಾರವನ್ನ ಮಹಿಳೆಯರು ಹಾರೈಸುತ್ತಿದ್ದಾರೆ. ನಾನು ಗ್ಯಾರಂಟಿ ಅನುಷ್ಠಾನ ಉಪಾಧ್ಯಕ್ಷೆಯಾಗಿ ಖುದ್ದು ಫಲಾನುವಿಗಳ ಅಭಿಪ್ರಾಯ ಸಂಗ್ರಹಿಸಲು ಮೈಸೂರಿನಿಂದ ಮಂಡ್ಯಕ್ಕೆ ಬಸ್ ನಲ್ಲಿ ಪ್ರಯಾಣ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲೋದಿಲ್ಲ ಇದು ಜನರಿಗಾಗಿ ಮಾಡಿರುವುದು ಮುಂದುವರೆಯುತ್ತದೆ ಎಂದರು.
ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲ ತಾಂತ್ರಿಕ ಸಮಸ್ಯೆ ಉಂಟಾಗಿತ್ತು ಆಗಾಗಿ ಎರಡು ತಿಂಗಳ ಹಣ ಹಾಕಲು ಸಾಧ್ಯವಾಗಿಲ್ಲ. ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಭರವಸೆ ನೀಡಿದ್ದಾರೆ ಕೆಲವೇ ದಿನಗಳಲ್ಲಿ ಬಾಕಿ ಹಣವನ್ನ ಕೂಡ ಜಮಾ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿ ಕೆಎಸ್ ಆರ್ ಟಿಸಿ ಡಿಟಿಒ ದಿನೇಶ್, ಸಹಾಯಕ ಸಂಚಾರಿ ಮ್ಯಾನೇಜರ್ ಕಲಾಶ್ರೀ ಇನ್ನಿತರರು ಉಪಸ್ಥಿತರಿದ್ದರು.