ಮುನಿರತ್ನ ಶಾಸಕ ಸ್ಥಾನ ರದ್ದುಗೊಳಿಸಿ ಪಕ್ಷದಿಂದ ಉಚ್ಛಾಟಿಸಲು ದಸಂಸ ಆಗ್ರಹ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.20:- ಶಾಸಕ ಮುನಿರತ್ನ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ಬಿಜೆಪಿ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾವಣೆಗೊಂಡ ದಸಂಸದ ಕಾರ್ಯಕರ್ತರು, ಮಹಿಳೆಯರು ಜಾತಿ ನಿಂದಕ, ಹೀನಾ ದೃಷ್ಟಿಯಿಂದ ಮಹಿಳೆ ಅವಮಾನಿಸಿರುವ ಗೂಂಡಾ ಶಾಸಕ ಮುನ್ನಿರತ್ನ ಅವರನ್ನು ವಜಾಗೊಳಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಮುನಿರತ್ನ ತಮ್ಮ ಸ್ಥಾನಮಾನದ ಘನತೆ ಮರೆತು, ಬೀದಿ ರೌಡಿಯಂತೆ ಅಸಹ್ಯಕರವಾಗಿ ವರ್ತಿಸಿದ್ದಾರೆ. ವಿನಃಕಾರಣ ಒಕ್ಕಲಿಗ ಮಹಿಳೆಯರ ಬಗ್ಗೆ ಹೀನ ದೃಷ್ಟಿಯಿಂದ ಅಪಮಾನಿಸಿರುವುದಲ್ಲದೇ ಅನಗತ್ಯವಾಗಿ ದಲಿತ ವ್ಯಕ್ತಿಯ ಜಾತಿ ನಿಂದನೆ ಮಾಡಿರುವುದು ತೀವ್ರ ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಮಾತನಾಡಿ. ದುರ್ನಡತೆಯ ಮುನಿರತ್ನ ಜನಪ್ರತಿನಿಧಿ ಸ್ಥಾನದಲ್ಲಿ ಮುಂದುವರೆಯುವ ಎಲ್ಲ ನೈತಿಕ ಅರ್ಹತೆಗಳನ್ನು ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ಸತ್ ಸಂಪ್ರದಾಯಗಳಿಗೆ ಹೆಸರಾದ ಕರ್ನಾಟಕ ವಿಧಾನಸಭೆಯಲ್ಲಿ ಇಂತಹ ದೃಷ್ಟ, ಭ್ರಷ್ಟ, ಕೊಲೆಗಡುಕ, ಜಾತಿವಾದಿ ಮುನಿರತ್ನ ಅಳಿಸಲಾಗದ ಕಳಂಕ ತರಲಿದೆ ಎಂದು ಕಿಡಿಕಾರಿದರು.
ಹೀನ ನಡೆತೆಯ ವ್ಯಕ್ತಿಯನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಯಾವ ರೀತಿಯಲ್ಲೂ ಕ್ಷಮಿಸಬಾರದು. ಒಂದು ವೇಳೆ ನೀವು ಕ್ಷಮಿಸಿದರೆ ಶಾಸಕರಾಗಿ ಮುಂದುವರೆಯಲು ಸಮ್ಮತಿಸಿದರೆ, ಭವಿಷ್ಯದ ದಿನಗಳಲ್ಲಿ ಆಯ್ಕೆಯಾಗುವ ರಾಜಕೀಯ ಅಪಾಯಗಳು ನಿರ್ಮಾಣವಾಗಲಿವೆ ಎಂದರು.
ಈ ಹಿನ್ನೆಲೆಯಲ್ಲಿ ಮುನಿರತ್ನ ನಡೆಸಿರುವ ದುಷ್ಕೃತ್ಯಗಳ ವಿರುದ್ಧ ದಾಖಲಾಗಿರುವ ದೂರುಗಳ ಆಧಾರದ ಮೇಲೆ ಹಾಗೂ ಭುಗಿಲೆದ್ದಿರುವ ಸಾರ್ವಜನಿಕ ಆಕ್ರೋಶ, ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮತ್ತು ಮುನಿರತ್ನ ಅವರ ಶಾಸಕ ಸ್ಥಾನವನ್ನು ರದ್ದಗೊಳಿಸಬೇಕು ಎಂದು ಆಗ್ರಹಿಸಿದರು.
ಬಡವರೇ ಜಾಸ್ತಿಯಾಗಿರುವ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸೂರು, ಉದ್ಯೊಗ, ಬಡವರ ಪರವಾಗಿ ಕೆಲಸ ಮಾಡುತ್ತೇವೆ ಸುಳ್ಳುಗಳ ಆಶ್ವಾಸನೆಗಳನ್ನು ನೀಡುತ್ತ ಹಣ ಬಲದ ಮೂಲಕ ಗೆದ್ದು ತನ್ನ ಎಲ್ಲ ಕ್ರಿಮಿನಲ್ ಚಟುವಟಿಕೆ ಮುಂದುವರಿಸಿದ್ದಾನೆ. ಈಗಾಗಲೇ ಮುನಿರತ್ನ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದು, ಕಾನೂನಿನ ಕುಣಿಕ್ಕೆಯನ್ನು ಬಿಗಿ ಮಾಡಿ ಕಠಿಣ ಶಿಕ್ಷೆ ವಿಧಿಸಿ ಜಾತಿ ನಿಂದನೆ ಮಾಡುವ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕು.
ದಲಿತ ಸಂಘರ್ಷ ಸಮಿತಿಯ ಅಂತರಿಕ ಶಿಸ್ತು ಮತ್ತು ಸಂಘಟನೆಯ ಜಿಲ್ಲಾ ಸಂಚಾಲಕ ಶಂಭುಲಿಂಗಸ್ವಾಮಿ, ಸಾಂಸ್ಕೃತಿಕ ವಿಭಾಗದ ಹೆಗ್ಗನೂರು ನಿಂಗರಾಜು, ಜಿಲ್ಲಾ ಖಜಾಂಚಿ ಬಿ.ಡಿ.ಶಿವಬುದ್ಧಿ, ಎಸ್.ರಾಜಣ್ಣ, ಮಹೇಶ, ಸೋಮಣ್ಣ, ಶಿವು, ರಾಮ್, ಸಾಧಿಕ್, ಆಪ್ಸರ್ ಅಹಮದ್, ಶೇಖರ್, ಕೃಷ್ಣ, ಶಿವಕುಮಾರ್, ಡಾ.ಟಿ.ಮಂಜು, ದಿಲೀಪ್, ಎನ್.ರಮೇಶ್, ಕುಮಾರ್ ಮಧುವನ, ಸೋಮಣ್ಣ, ಮಹದೇವಮ್ಮ, ಗೌರಮ್ಮ, ಪ್ರೇಮ, ರಾಜೇಶ್ವರಿ, ಮಂಗಳಾ, ಸೆಲ್ವಿ, ಪುಟ್ಟತಾಯಮ್ಮ, ಸಿದ್ದಮ್ಮ, ಲಕ್ಷ್ಮೀ, ತಾಯಮ್ಮ, ಚಿಕ್ಕತಾಯಮ್ಮ, ಜಯಲಕ್ಷ್ಮೀ, ಕುಮಾರಿ, ಶಶಿಕಲಾ, ಪುಷ್ಪಾ, ಶಿವಮ್ಮ, ಜಯಮ್ಮ, ಲೀಲಾ, ಲೀಲಾವತಿ, ಕಾಳಮ್ಮ, ಮಂಚಮ್ಮ, ವಿಜಯಲಕ್ಷ್ಮೀ, ಸ್ವರ್ಣಗೌರಿ, ಗೌರಮ್ಮ ಇನ್ನಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.