ಸುನೀಲ್ ಬೋಸ್ 1 ಲಕ್ಷಕ್ಕೂ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ: ಸಿ.ಪುಟ್ಟರಂಗಶೆಟ್ಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.10:- ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಒಂದು ಲಕ್ಷಕ್ಕೂ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಎಂಐಎಸ್‍ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಅವರು ತಮ್ಮ ಬೆಂಬಲಿಗರೊಂದಿಗೆ ಬಿಸಲವಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಿಸಲವಾಡಿ, ಬಂದಿಗೌಡನಹಳ್ಳಿ, ಕೋಡಿಉಗನೆ, ಕಾಲೋನಿ ಹಾಗು ಹೊನ್ನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚನ್ನಪ್ಪನಪುರ, ಹೊನ್ನಹಳ್ಳಿ, ನಿಜಲಿಂಗನಪುರ, ನರಸಮಂಗಲ, ಹೊನ್ನಹಳ್ಳಿ ಹುಂಡಿ ವಡ್ಗಲ್‍ಪುರ, ಬೋಕ್ಕೆಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಸುನೀಲ್ ಬೋಸ್ ಒಂದು ಲಕ್ಷಕ್ಕೂ ಹೆಚ್ಚಿನ ಬಹುಮತದಲ್ಲಿ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಚಾ.ನಗರ ಕ್ಷೇತ್ರದಲ್ಲಿಯ ಸಹ ಹೆಚ್ಚಿನ ಲೀಡ್ ಅನ್ನು ನನ್ನ ಕ್ಷೇತ್ರದ ಮತದಾರರು ನೀಡುತ್ತಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವು ಘೋಷಣೆ ಮಾಡಿದ್ದ ಗ್ಯಾರಂಟಿಯನ್ನು ನೋಡಿ ಮಹಿಳಾ ಮತದಾರರು ಹಾಗೂ ರೈತರು ಹೆಚ್ಚಿನ ಮತಗಳನ್ನು ನೀಡಿದ್ದರು. ಈಗ ನಮ್ಮ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗು ಡಿಸಿಎಂ ಶಿವಕುಮಾರ್ ಅವರು ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿ, ಪ್ರತಿ ಮನೆಯ ಯಜಮಾನಿಗೆ 2 ಸಾವಿರ ರೂ. ಗೃಹ ಲಕ್ಷ್ಮಿ ಯೋಜನೆ, ಉಚಿತ ವಿದ್ಯುತ್ ನೀಡುವ ಮೂಲಕ ಗೃಹ ಜ್ಯೋತಿ, ಶಕ್ತಿ ಯೋಜನೆಯಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಉಚಿತ ಬಸ್ ಪ್ರಯಾಣ, ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಉಚಿತ ಅಕ್ಕಿ ಹಾಗು ಇನ್ನು 5 ಕೆಜಿಗೆ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗಿಗಳಿಗೆ 3 ಸಾವಿರ ರೂ. ಪ್ರತಿ ತಿಂಗಳು ಉಚಿತವಾಗಿ ಕೆಲಸ ದೊರೆಯುವರೆಗೆ ನೀಡಲಾಗುತ್ತದೆ ಎಂದರು.
ಈಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಚುನಾವಣೆ ಪ್ರಾಣಾಳಿಕೆಯಲ್ಲಿ ಪ್ರತಿ ಕುಟುಂಬದ ಮಹಿಳೆಯರಿಗೆ 1 ಲಕ್ಷ ರೂ. ಘೋಷಣೆ, ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಗ್ಯಾರಂಟಿಗಳನ್ನು ನೀಡಿದ್ದಾರೆ. 10 ವರ್ಷಗಳ ಮೋದಿ ಆಡಳಿತದಿಂದ ರಾಜ್ಯಕ್ಕೆ ಹೆಚ್ಚಿನ ಅನ್ಯಾಯವಾಗಿದೆ. ಈಗ ಬಿಜೆಪಿಯವರು ಮೋದಿಯೇ ಗ್ಯಾರಂಟಿ ಎಂದು ಹೇಳುತ್ತಿದ್ದಾರೆ. ಇನ್ನು ಮೋದಿ ಗ್ಯಾರಂಟಿ ತೆಗೆದುಕೊಂಡು ಏನು ಮಾಡಲು ಸಾಧ್ಯ ಎಂದು ಪುಟ್ಟರಂಗಶೆಟ್ಟಿ ಟೀಕಿಸಿದರು.
ಹೀಗಾಗಿ ರಾಜ್ಯದಲ್ಲಿ 20ಕ್ಕು ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಮತ್ತಷ್ಟು ಗಟ್ಟಿಯಾಗಲಿದೆ. ಇನ್ನು ನಾಲ್ಕು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ಪುಟ್ಟರಂಗಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕಲವಾಡಿ ಗುರುಸ್ವಾಮಿ, ಮಹಮದ್ ಅಸ್ಗರ್, ಎಪಿಎಂಸಿ ನಿರ್ದೇಶಕ ಆಲೂರು ಪ್ರದೀಪ್, ಬಿಸಲವಾಡಿ ಗ್ರಾ.ಪಂ. ಅಧ್ಯಕ್ಷೆ ರಮ್ಯನಾಗರಾಜು, ಉಪಾಧ್ಯಕ್ಷ ಬೇಬಿ, ಮಾಜಿ ಅಧ್ಯಕ್ಷ ಮಹದೇವಪ್ಪ, ಮುಖಂಡರಾದ ಯಣಗುಂಬ ರಾಜೇಂದ್ರ, ಶಂಭಪ್ಪ, ಗೌಡಿಕೆ ಶೇಖರಪ್ಪ, ಗಿರಿಯಪ್ಪ, ಹೊನ್ನಹಳ್ಳೀ ಬಸವಣ್ಣ, ರವಿಬಿಸಲವಾಡಿ, ಹೊನ್ನಹಳ್ಲಿ ಪ್ರಕಾಶ್, ಶಂಕರ್‍ರಾಮ್, ಕಾಗಲವಾಡಿ ಶ್ರೀನಿವಾಸಶೆಟ್ಟಿ, ಮಹೇಶ್ ಚಿಕ್ಕಮೋಳೆ, ಮಲ್ಲಿಕಾರ್ಜುನಸ್ವಾಮಿ, ಸ್ವಾಮಿ ಕರಿನಂಜನಪುರ, ವಿನೋದ್ ಮೊದಲಾದವರು ಇದ್ದರು.