ಮಹಿಳೆಯರ ಜೋಡಿ ಕೊಲೆ: ಹತ್ತು ಲಕ್ಷ ರೂ.ಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಕಲಬುರಗಿ:ಏ.8: ಜಿಲ್ಲೆಯ ಆಳಂದ್ ತಾಲ್ಲೂಕಿನ ಕೇರಿಅಂಬಲಗಾ ಗ್ರಾಮದ ಕೂಲಿ ಕಾರ್ಮಿಕರಾದ ಶ್ರೀಮತಿ ಶರಣಮ್ಮ ಗಂಡ ಅಣ್ಣಪ್ಪ ಗಡದನ್ ಹಾಗೂ ಶ್ರೀಮತಿ ಚಂದಮ್ಮ ಗಂಡ ಬಾಬುರಾವ್ ಅವರಿಗೆ ನಗರದ ತಾವರಗೇರಾದ ಹೊಲದಲ್ಲಿ ನಿಗೂಢ ರೀತಿಯಲ್ಲಿ ಹತ್ಯೆ ಮಾಡಲಾಗಿದ್ದು, ಪ್ರಕರಣದ ಆರೋಪಿಗಳನ್ನು ಬಂಧಿಸಿ, ಸಂತ್ರಸ್ತ ಕುಟುಂಬಕ್ಕೆ ಹತ್ತು ಲಕ್ಷ ರೂ.ಗಳ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕೊಲೆಗಾರರನ್ನು ಇನ್ನೂ ಬಂಧಿಸಿಲ್ಲ. ಹೀಗಾಗಿ ತಲ್ಲಣವುಂಟಾಗಿದೆ. ಜೋಡಿ ಕೊಲೆಗಳು ಜನರಲ್ಲಿ ವಿಶೇಷವಾಗಿ ದುಡಿಯುವ ವರ್ಗದಲ್ಲಿ ಭಯವನ್ನು ಹುಟ್ಟಿಸಿವೆ. ಕೊಲೆ ಘಟನೆ ಖಂಡನೀಯ ಎಂದು ಅವರು ಹೇಳಿದರು.
ಕೂಡಲೇ ಆರೋಪಿಗಳನ್ನು ಬಂಧಿಸಿ, ಉಗ್ರ ಶಿಕ್ಷೆ ವಿಧಿಸುವಂತೆ, ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ಹತ್ತು ಲಕ್ಷ ರೂ.ಗಳ ಪರಿಹಾರ ಕೊಡುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಎಲ್ಲರಿಗೂ ನೀಡಿ ತಕ್ಷಣವೇ ಕೂಲಿ ಪಾವತಿಸುವಂತೆ ಅವರು ಒತ್ತಾಯಿಸಿದರು.
ಮಹಿಳೆಯರಿಗೆ ಕೆಲಸವಿಲ್ಲದ್ದಕ್ಕಾಗಿ ಕಲಬುರ್ಗಿಯಲ್ಲಿ ನಿತ್ಯ ಸಾವಿರಾರು ಕೂಲಿಕಾರ್ಮಿಕರು ರೈಲು ನಿಲ್ದಾಣ, ಓಂನಗರ ದ್ವಾರ, ಮಿಜಗುರಿ ಮುಂತಾದೆಡೆ ಕೆಲಸಕ್ಕಾಗಿ ಕಾದು ನಿಂತಿರುತ್ತಾರೆ. ಅಲ್ಲೆಲ್ಲ ಅನಧಿಕೃತ ಮಾನವ ಮಾರ್ಕೆಟ್ ಅಣಿ ನೆರೆದಿರುತ್ತದೆ. ಹೀಗೆ ಕಾದು ನಿಂತವರ ಪೈಕಿ ಕೇವಲ 20ರಷ್ಟು ಜನರಿಗೆ ಕೆಲಸ ದೊರೆತು ಉಳಿದವರು ಬರಿಗೈನಿಂದ ಮನೆಗೆ ಮರಳುತ್ತಾರೆ. ಬರಗಾಲದ ಸಂದರ್ಭದಲ್ಲಿಯಾದರೂ ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೂ ವಿಸ್ತರಿಸಬೇಕು ಹಾಗೂ ಮಹಿಳೆಯರು ಎಲ್ಲಿ ಕೆಲಸ ಮಾಡಿದರೂ ಅಲ್ಲಿ ಕರ್ಷಣೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆ. ನೀಲಾ, ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಸುಧಾಮ್ ಧನ್ನಿ, ಪಾಂಡುರಂಗ್ ಮಾವಿನಕರ್, ಲವಿತ್ರ, ಸುಜಾತಾ ಕುಸನೂರ್, ಶರಣಬಸಪ್ಪ ಮಮಶೆಟ್ಟಿ, ಸುಗಂಧಾ ಮುಂತಾದವರು ಪಾಲ್ಗೊಂಡಿದ್ದರು.