ಚೆನ್ನಣ್ಣನ ಆದರ್ಶ ಮುಂದಿನ ಪೀಳಿಗೆಗೆ ಮುಟ್ಟಬೇಕು: ಡಾ.ಸ್ವಾಮಿ ರಾವ್ ಕುಲಕರ್ಣಿ
ಕಲಬುರಗಿ:ಏ.8: ಕಲ್ಯಾಣ ಕರ್ನಾಟಕ ಭಾಗದ ಮೇರು ಸಾಹಿತಿ ಡಾ. ಚೆನ್ನಣ್ಣ ವಾಲಿಕಾರ್ ಜನಮನದ ಕವಿಯಾಗಿ ಬೆಳೆದವರು ಮತ್ತು ಆದರ್ಶದ ಸಾಹಿತಿಯಾಗಿ ಬದುಕು ಮಾಡಿದವರಾಗಿದ್ದು ಅವರ ಆದರ್ಶವನ್ನು ಮುಂದಿನ ಜನಾಂಗಕ್ಕೆ ಮುಟ್ಟಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹಿರಿಯ ಸಾಹಿತಿಗಳಾದ ಡಾ. ಸ್ವಾಮಿ ರಾವ್ ಕುಲಕರ್ಣಿ ಹೇಳಿದರು.
ಕಲ್ಬುರ್ಗಿಯ ಮಹಾಲಕ್ಷ್ಮಿ ಲೇಔಟ್ ನ ” ಸಾಹಿತ್ಯ ಸದನ ” ದಲ್ಲಿ ಸೋಮವಾರ (ಏಪ್ರಿಲ್ 8 ರಂದು) ಡಾ. ಚನ್ನಣ್ಣ ವಾಲಿಕಾರ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗೆ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಅವರು ಹತ್ತು ಸಾವಿರ ರೂಪಾಯಿಯ ಚೆಕ್ ಹಸ್ತಾಂತರಿಸುವ ಸರಳ ಸಮಾರಂಭದಲ್ಲಿ ಮಾತನಾಡುತ್ತ ಚೆನ್ನಣ್ಣ ವಾಲೀಕಾರ್ ಪ್ರೀತಿ ಹಂಚಿದ ಸಾಹಿತಿ. ಪ್ರೀತಿಗೆ ಮತ್ತೊಂದು ಹೆಸರೇ ಚೆನ್ನಣ್ಣನಾಗಿದ್ದು ಅವರ ಶಿಷ್ಯ ವೃಂದದಲ್ಲಿ ಡಾ. ಸದಾನಂದ ಪೆರ್ಲ ಅವರು ಕೂಡ ಉನ್ನತ ವ್ಯಕ್ತಿತ್ವವನ್ನು ಪಡೆದು ಬೆಳೆದವರು. ವಾಲೀಕಾರ್ ಕಟ್ಟಿದ ಜೀವನ ಮೌಲ್ಯವು ಈ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದ್ದು ಆ ಚಿಂತನೆಗಳ ದಾರಿಯಲ್ಲಿ ಸಮಾಜವನ್ನು ಬೆಳೆಸಲು ಅವರ ಹೆಸರಿನಲ್ಲಿ ಕಟ್ಟಿದ ಸಂಸ್ಥೆಗೆ ಶಿಷ್ಯಂದಿರು ಮತ್ತು ಅಭಿಮಾನಿಗಳು ನೀಡುವ ದೇಣಿಗೆ ಮತ್ತು ಸಹಕಾರದಿಂದ ಚೆನ್ನಣ್ಣ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಸಾಧ್ಯ ಎಂದು ಹೇಳಿದರು. ಈಗಾಗಲೇ ರಾಜ್ಯ ಸರ್ಕಾರವು ಡಾ. ಚನ್ನಣ್ಣ ವಾಲೀಕಾರ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಲು ಮುಂದಾಗಿರುವುದು ಸಂತಸದ ವಿಷಯ. ಚುನಾವಣೆ ಮುಗಿದ ಕೂಡಲೇ ಟ್ರಸ್ಟಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಕ್ರಿಯಾಶೀಲ ಕಾರ್ಯ ಚಟುವಟಿಕೆ ಪ್ರಾರಂಭಿಸಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕ ಹೊಂದಿದ ಸಾಹಿತಿ, ಸಂಘಟಕ ಬಿ.ಎಚ್ ನಿರಗುಡಿ ಅವರು ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಯಾವುದೇ ಸ್ಥಾನಮಾನಗಳು ಆ ಭಾಗದ ಅಭಿವೃದ್ಧಿಗೆ ನೆರವಾಗಬೇಕಾಗಿದೆ.ಚೆನ್ನಣ್ಣರ ಮೌಲಿಕ ಬದುಕು ನಮಗೆಲ್ಲ ಪ್ರೇರಣೆಯಾಗಿದೆ,
ಸರಕಾರದ ಟ್ರಸ್ಟ್ ರಚನೆಯಿಂದ ಮತ್ತು ಖಾಸಗಿಯಾಗಿ ನಡೆಸುವ ಈ ಸಂಸ್ಥೆಯಿಂದ ಸಮಾಜಕ್ಕೆ ಚೆನ್ನಣ್ಣನ ಚಿಂತನೆಗಳನ್ನು ತಿಳಿಸುವ ಪ್ರಯತ್ನವಾಗಲಿ ಎಂದು ಆಶಿಸಿದರು. ವಾಲಿಕಾರ್ ಹೆಸರಿನಲ್ಲಿ ಸ್ವಾಮಿರಾವ್ ಕುಲಕರ್ಣಿ ಮತ್ತು ಸಮಾನ ಮನಸ್ಕ ಸಾಹಿತಿಗಳು ಖಾಸಗಿಯಾಗಿ ಪ್ರಾರಂಭಿಸಿದ ಸಂಸ್ಥೆ ಇಂದು ಚೆನ್ನಣ್ಣನ ಸಂದೇಶಗಳನ್ನು ನಾಡಿಗೆ ಪಸರಿಸುವ ಉತ್ತಮ ಕೆಲಸವನ್ನು ಮಾಡಿ ವ್ಯೋಮಾಯೋಮ ವಾರ್ಷಿಕ ಪ್ರಶಸ್ತಿ ಪ್ರದಾನ, ಚೆನ್ನಣ್ಣನ ಸಾಹಿತ್ಯದ ಬಗ್ಗೆ ಉಪನ್ಯಾಸ- ಚರ್ಚೆಯನ್ನು ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯವಾಗಿದ್ದು ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ಚೆನ್ನಣ್ಣನ ಶಿಷ್ಯ ಬಳಗ ಮತ್ತು ಅಭಿಮಾನಿಗಳು ಸಂಸ್ಥೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಚೆನ್ನಣ್ಣವರದು ಪ್ರೇರಣದಾಯಿವ್ಯಕ್ತಿತ್ವವಾಗಿದ್ದು ಕವಿಯಾಗಿ ಮತ್ತು ಸಾಹಿತಿಯಾಗಿ ಉತ್ತಮ ಸಮಾಜವನ್ನು ಕಟ್ಟಿ ಬೆಳೆಸಲು ಪ್ರಯತ್ನ ಪಟ್ಟವರು ಎಂದು ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಹೇಳಿದರು. ಸಂಸ್ಥೆಯ ಉಪಾಧ್ಯಕ್ಷರು ಹಾಗೂ ಹಿರಿಯ ಸಾಹಿತಿಗಳಾದ ಡಾ. ಕೆ ಎಸ್ ಬಂಧು ಮಾತನಾಡಿ ಚೆನ್ನಣ್ಣ ವಾಲಿಕಾರ್ ತಮ್ಮ ಬದುಕಿನಲ್ಲಿ ಇತರರನ್ನು ಬೆಳೆಸುವುದರ ಮೂಲಕವೇ ಸಂತಸ ಕಂಡವರು. ಅವರು ಕಟ್ಟಿದ ಶಿಷ್ಯವರ್ಗವು ಇವತ್ತು ನಾಡಿನ ಉದ್ದಗಲಕ್ಕೂ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಆದ ಹೆಸರನ್ನು ಉಳಿಸಿಕೊಂಡು ಬೆಳೆಯುತ್ತಿರುವುದು ಹೆಮ್ಮೆ. ಭೌತಿಕವಾಗಿ ಚೆನ್ನಣ್ಣ ನಮ್ಮೊಡನೆ ಇಲ್ಲದಿದ್ದರೂ ಅವರ ಆದರ್ಶವನ್ನು ಶಿಷ್ಯರ ಮೂಲಕ ಈಗ ಪಸರಿಸಲಾಗುತ್ತಿದೆ ಎಂದು ಹೇಳಿದರು. ಅಂತಹ ನೆಚ್ಚಿನ ಶಿಷ್ಯ ಬಳಗದಲ್ಲಿ ಡಾ. ಸದಾನಂದ ಪೆರ್ಲ ಕೂಡ ಒಬ್ಬರಾಗಿದ್ದು ತನ್ನ ಸಮಾಜಮುಖಿ, ಸಾಹಿತ್ಯ ಮುಖಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಪಡೆದು ಕಲಬುರ್ಗಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವುದು ಹೆಮ್ಮೆಯ ಸಂಗತಿ. ಇಂತಹ ವ್ಯಕ್ತಿಗಳನ್ನು ನಿರ್ಮಾಣ ಮಾಡಿದ ಯಶಸ್ಸು ಡಾ. ಚೆನ್ನಣ್ಣ ವಾಲೀಕಾರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಡಾ. ಚನ್ನಣ್ಣ ವಾಲೀಕಾರ್ ಅವರು ತನ್ನ ಬದುಕಿನದ್ದಕ್ಕೂ ಸಾಹಿತ್ಯ ಮತ್ತು ಸಮಾಜಕ್ಕೆ ಅನುಪಮ ಕೊಡುಗೆಯನ್ನು ಕೊಟ್ಟು ಅನೇಕರನ್ನು ಬೆಳೆಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೆನ್ನಣ್ಣನ ಸಾಹಿತ್ಯವು ನೆಲದ ಮತ್ತು ಶೋಷಿತರ ದನಿಯಾಗಿದೆ. ಅವರ ಹೆಸರಿನಲ್ಲಿರುವ ಸಂಸ್ಥೆ ಹಾಗೂ ಸದ್ಯದಲ್ಲೇ ಆರಂಭವಾಗುವ ಸರ್ಕಾರದ ನೂತನ ಟ್ರಸ್ಟ್ ಉತ್ತಮ ಕೆಲಸಗಳನ್ನು ಮಾಡುವಂತಾಗಲಿ ಎಂದು ಹೇಳಿದರು. ಸಂಸ್ಥೆಯ ಕೋಶಾಧಿಕಾರಿ ನ್ಯಾಯವಾದಿ ಅಪ್ಪಾಸಾಹೇಬ್ ವಾಲಿಕಾರ್, ಶ್ರೀಮತಿ ಅಮೃತಾ ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು.