ಬೆಳಗಲ್ಲು ವೀರಣ್ಣ ಗುರು-ಶಿಷ್ಯ ಪರಂಪರೆಯ ಜೀವಂತ ಸಾಕ್ಷಿ
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.08: ದೇಶ ವೀದೇಶಗಳಲ್ಲಿ ಬಳ್ಳಾರಿಯನ್ನು ಸುವಿಖ್ಯಾತಗೊಳಿಸಿದ ರಾಘವ ಅವರ ಶಿಷ್ಯ ಜೋಳದರಾಶಿ ದೊಡ್ಡನಗೌಡರು, ಅವರ ಶಿಷ್ಯ ಸಿಡಿಗಿನಮೊಳೆ ಚಂದ್ರಯ್ಯ, ಅವರ ಶಿಷ್ಯರೇ ಬೆಳಗಲ್ಲು ವೀರಣ್ಣ ಹೀಗಾಗಿ ಈ ಆಧುನಿಕ ಯುಗದಲ್ಲಿ ಬೆಳಗಲ್ಲು ವೀರಣ್ಣ ಅವರು ಗುರು-ಶಿಷ್ಯ ಪರಂಪರೆಯ ಜೀವಂತ ಸಾಕ್ಷಿಯಾಗಿದ್ದಾರೆಂದು ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಆರ್. ದುರ್ಗಾದಾಸ ನುಡಿದರು.
ಅವರು ನಗರದಲ್ಲಿ ನಿನ್ನೆ ನಡೆದ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಬೆಳಗಲ್ಲು ವೀರಣ್ಣ ‘ಆತ್ಮಕಥನ ನಾಟಕದ ಗೊಂಬೆ’ ಪುಸ್ತಕ ಬಿಡುಗಡೆಗೊಳಿಸಿ ಮಾಡನಾಡುತ್ತಿದ್ದರು.
ವೀರಣ್ಣನವರು ನಾಟಕ ರಂಗದಲ್ಲಿ ಪಡಿಪಾಟಲು ಪಟ್ಟು ಮನೆತನದ ಕುಲಕಸುಬು ‘ತೊಗಲುಗೊಂಬೆ’ ಆಟವನ್ನು ಕೈಗೆತ್ತಿಕೊಂಡು ಅದರಲ್ಲೇ ದೇಶ ವಿದೇಶಗಳಲ್ಲಿ ಪ್ರಖ್ಯಾತರಾದರು. ಅತ್ಯಂತ ಸೌಮ್ಯ, ವಿನಯವಂತರಾಗಿದ್ದರೂ ಅನ್ಯಾಯಕ್ಕೆ ವಿರೋಧಿಸುವ ಮನಸ್ಥಿತಿ ಅವರಿಗಿತ್ತು ಎಂದರು.
ಬೆಳಗಲ್ಲು ವೀರಣ್ಣ ನಾಟಕ ರಂಗದಲ್ಲೂ ಸೈ ಎನಿಸಿಕೊಂಡು ನಂತರ ತೊಗಲುಗೊಂಬೆ ಆಟಕ್ಕೆ ಬಂದಿದ್ದರ ನೆನಪಿನಲ್ಲಿ ನಾನೇ ನಿರೂಪಿಸಿದ ಅವರ ಆತ್ಮಕಥನಕ್ಕೆ ‘ನಾಟಕ ಗೊಂಬೆ’ ಶೀರ್ಷಿಕೆ ನೀಡಿದೆ ಎಂದು ಕೃತಿಕರ್ತೃ ಡಾ.ರಾಜಪ್ಪ ದಳವಾಯಿ ತಮ್ಮ ನುಡಿ ನಮನದಲ್ಲಿ ಹೇಳಿದರು. ಬಳ್ಳಾರಿಯಲ್ಲಿರುವ ಅದ್ಭುತ ಕಲಾವಿದರ ಜೀವನಗಾಥೆಯನ್ನು ಸಾಹಿತಿ ಬರಹಗಾರರು ಅವರೊಂದಿಗೆ ಅನುಸಂಧಾನ ನಡೆಸಿ ಬರೆದು ಪ್ರಕಟಿಸಬೇಕು ಎಂದು ನುಡಿದ ಅವರು ಬೆಳಗಲ್ಲು ವೀರಣ್ಣ ಸ್ಮರಣೆ ಎಂದರೆ ರಕ್ತರಾತ್ರಿ, ತೊಗಲುಗೊಂಬೆ ಆಟ, ರಂಗಗೀತೆ ಇದ್ದಾಗಲೇ ಅದು ನಿಜವಾದ ಸ್ಮರಣೆ ಅದಕ್ಕಾಗಿ ರಂಗತೋರಣ ಹಾಗೂ ಹೆಜ್ಜೆ ಗೆಜ್ಜೆ ತಂಡಕ್ಕೆ ಅಭಿನಂದನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಇಂಜಿನಿಯರ್ ಎಂ.ಜಿ.ಗೌಡ ಅವರು ಮಾತನಾಡುತ್ತ ಬೆಳಗಲ್ಲು ವೀರಣ್ಣನವರು ಅದ್ಭುತ ಜೀವನೋತ್ಸಾಹಿ. ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಬಂದಾಗ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಇಂಡೋನೇಷಿಯಾ ಮುಸ್ಲಿಂ ರಾಷ್ಟ್ರವಾದರೂ ಅಲ್ಲಿಯ ರಾಮಾಯಣ ಅಭಿಮಾನ ಅವರ ಮನಸೂರೆಗೊಂಡಿತ್ತು. ನಮ್ಮ ತಂದೆ ಹಾಗೂ ವೀರಣ್ಣನವರದು ಅವಿನಾಭಾವ ಸಂಬಂಧ. ಶಿವದುರಂಧರ ಬಯಲಾಟದಲ್ಲಿ ತಮ್ಮ ತಂದೆನೂ ಪಾತ್ರ ಮಾಡಿದ್ದರು. ಅದರಲ್ಲಿ ವೀರಣ್ಣನವರದು ಸ್ತ್ರೀ ಪಾತ್ರ. ಒಮ್ಮೆ ವೀರಣ್ಣನವರು ನಮ್ಮ ಮನೆಗೇ ಬಂದು ತಂದೆಯವರನ್ನು ಸನ್ಮಾನಿಸಿದ್ದು ಅವರ ಹಿರಿಮೆಯ ಸದ್ಗುಣ ಎಂದು ಅಭಿಪ್ರಾಯ ಪಟ್ಟರು.
ಮೈಸೂರಿನ ಹೆಸರಾಂತ ರಂಗಕರ್ಮಿ ಬಿ.ಎಂ.ರಾಮಚಂದ್ರ ಅವರು ವೀರಣ್ಣನವರ ‘ಸ್ಮರಣಾಂಜಲಿ’ ಆಮಂತ್ರಣ ತಲುಪುತ್ತಿದ್ದಂತೆಯೇ ಇದಕ್ಕಾಗಿ ಇಲ್ಲಿಗೆ ಬಂದೆ. 1974ರಲ್ಲಿ ವೀರಣ್ಣನವರ ಪ್ರಥಮ ಭೇಟಿ ಆಗಿನಿಂದಲೂ ಅವರು ನನ್ನನ್ನು ಕಂಡಾಗಲೆಲ್ಲ ‘ಅಪ್ಪಾ’ ಎಂದೇ ಮಾತನಾಡಿಸುತ್ತಿದ್ದರು. ಅವರ ಹಿರಿಮಗ ನಾನೇ ಎನ್ನುವಷ್ಟು ನನಗೆ ಪ್ರೀತಿ ತೋರುತ್ತಿದ್ದರು. ಹೀಗಾಗಿ ಅವರ ಕೊನೆ ದರ್ಶನಕ್ಕೂ ಬಂದೆ. ಈ ಪ್ರಥಮ ವರ್ಷದ ಸ್ಮರಣೆಗೂ ಬರಲು ಅವರ ಪ್ರೀತಿಯೇ ಕಾರಣ. ಅವರ ಶಿಸ್ತು ನಮಗೆ ಆದರ್ಶ. ಯಾರಿಗೂ ಜೋರುಬಾಯಿಯಲ್ಲಿ ಮಾತಾಡಿದವರಲ್ಲ. ಅವರ ಬಗ್ಗೆ ಡಾ. ರಾಜಪ್ಪ ದಳವಾಯಿ ಅವರು ಬರೆದದ್ದು ಮನಸ್ಸಿಗೆ ನಾಟುತ್ತದೆ. ಅಂತಃಕರಣ ತಲುಪುತ್ತದೆ ಎಂದರು.
ಕಾರ್ಯಕ್ರಮದ ಆಯೋಜಕರಲ್ಲೊಬ್ಬರಾದ ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ಈ ವರ್ಷದಿಂದ ಕೊಡಮಾಡುತ್ತಿರುವ ‘ನಾಡೋಜ ಬೆಳಗಲ್ಲು ವೀರಣ್ಣ’ ಪ್ರಥಮ ಪ್ರಶಸ್ತಿಯನ್ನು ತೊಗಲುಗೊಂಬೆ ಕಲಾವಿದ 91 ವರ್ಷದ ‘ನಾರಾಯಣಪ್ಪ ಕಾರಿಗನೂರು’ ಅವರಿಗೆ ಶಾಲು, ಪೇಟ, ಹಾರ, ಫಲಪುಷ್ಪ, ನಟರಾಜ ವಿಗ್ರಹದೊಂದಿಗೆ 11 ಸಾವಿರ ರೂ ಚೆಕ್ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಬೆಳಗಲ್ಲು ವೀರಣ್ಣನವರನ್ನು ಗುರುಗಳೆಂದು ನೆನೆದು ಅವರ ಪ್ರೋತ್ಸಾಹವನ್ನು ಸ್ಮರಿಸಿದರು.
ಕರ್ನಾಟಕ ಸರ್ಕಾರದ ರಂಗ ಸಮಾಜ ಸದಸ್ಯರಾಗಿ ನಿಯುಕ್ತಗೊಂಡ ಡಾ.ರಾಜಪ್ಪ ದಳವಾಯಿ ಹಾಗೂ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ಕೆ.ಆರ್. ದುರ್ಗಾದಾಸ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕೆ.ವಸಂತಕುಮಾರ ಹಾಗೂ ಕವಿತಾ ಗಂಗೂರ ಅವರಿಂದ ಗೀತ ನಮನ ಕಾರ್ಯಕ್ರಮ ನಡೆಯಿತು. ಕ್ಯಾಷಿಯೋ ತಿಪ್ಪೇಸ್ವಾಮಿ ಹಾಗೂ ತಬಲಾ ವಿರುಪಾಕ್ಷಪ್ಪ ಸಾಥ ನೀಡಿದರು.
ವೇದಿಕೆ ಮೇಲೆ ಅತಿಥಿಗಳೊಂದಿಗೆ ರಂಗತೋರಣ ಅಧ್ಯಕ್ಷ ಪ್ರೊ.ಆರ್.ಭಿಮನಸೇನ, ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಹೆಜ್ಜೆ ಗೆಜ್ಜೆ ಟ್ರಸ್ಟ್‍ನ ಅಧ್ಯಕ್ಷ ಹೆಚ್.ತಿಪ್ಪೇಸ್ವಾಮಿ ಹಾಜರಿದ್ದರು. ನಗರದ ಉಪನ್ಯಾಸಕ ಎ.ಎಂ.ಪಿ. ವೀರೇಶಸ್ವಾಮಿ ಅವರು ಬೆಳಗಲ್ಲು ವೀರಣ್ಣ ನವರ ಬಗ್ಗೆ ಬರೆದ ಕವನ ವಾಚನದಿಂದ ಸಮಾರಂಭ ಆರಂಭವಾಯಿತು. ಕಾರ್ಯಕ್ರಮವನ್ನು ಹೆಚ್. ತಿಪ್ಪೇಸ್ವಾಮಿ ಸ್ವಾರಸ್ಯ ಪೂರ್ಣವಾಗಿ ನಿರೂಪಸಿದರು. ಬಯಲಾಟ ಕಲಾವಿದರ ಸುಬ್ಬಣ್ಣ ವಂದಿಸಿದರು.
ನಂತರ ಶ್ರೀರಾಮಾಂಜನೇಯ ತೊಗಲುಗೊಂಬೆ ಟ್ರಸ್ಟ್‍ನವರಿಂದ ‘ಮಹಾತ್ಮಾಗಾಂಧಿ’ ತೊಗಲುಗೊಂಬೆ ಪ್ರದರ್ಶನ ನಡೆಯಿತು. ಆಟವನ್ನು ಬೆಳಗಲ್ಲು ವೀರಣ್ಣ ಪುತ್ರ ಹನುಮಂತು ನಿರ್ವಹಿಸಿದರು.