ಎಸ್‌ಯುಸಿಐ ಕಾರ್ಯಕರ್ತರು, ಬೆಂಬಲಿಗರ ಸಭೆ
ರಾಯಚೂರು,ಏ.೮- ಬಂಡವಾಳಶಾಹಿಗಳು ಮತ್ತು ಶ್ರೀಮಂತ ವರ್ಗದ ಪರವಾದ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜನಸಾಮಾನ್ಯರ ಕಡುವೈರಿಗಳಾಗಿದ್ದಾರೆ. ದುಡಿಯುವ ಜನತೆಯ ಪರವಾಗಿ ನೀತಿಗಳನ್ನು ತರುವ ಬದಲು ಕರ್ಪೋರೆಟ್ ಕಂಪನಿಗಳ ಪರವಾದ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ ಎಂದು ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಚಂದ್ರ ಗಿರೀಶ್ ಹೇಳಿದರು.
ನಗರದ ಸಲಾರ್ ಫಂಕ್ಷನ್ ಹಾಲ್‌ನಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ರೈತರು, ಕಾರ್ಮಿಕರು, ದುಡಿಯುವ ಜನತೆಯ ವಿರೋಧಿಗಳಾಗಿದ್ದಾರೆ. ಈ ವಿಷಯವು ದೇಶದ ಜನರಿಗೆ ಗೊತ್ತಾಗುತ್ತಿದೆ. ಹಾಗಾಗಿ ಈ ಪಕ್ಷಗಳು ವಿವಿಧ ಹೊಸ ಹೊಸ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ನಂಬಿಸಿ ಮತ ಬೇಟೆಯಾಡಲು ತಿರುಗುತ್ತಿದ್ದಾರೆ ಎಂದರು.
ಜನರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ಕಟ್ಟುತ್ತಿರುವ ದುಡಿಯುವ ಜನತೆಯ ಆಶಾಕಿರಣವಾದ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸುವಂತೆ ಕೆಲಸ ಮಾಡಬೇಕು ಹಾಗು ತನು, ಮನ,ಧನ ಕೊಟ್ಟು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ವೀರೇಶ್ ಎನ್ ಎಸ್ ಮಾತನಾಡಿ,ಇಂದು ನಮ್ಮ ದೇಶವನ್ನು ಆಳುವ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಚುನಾವಣಾ ಬಾಂಡ್ ಹೆಸರಿನಲ್ಲಿ ಅತಿ ದೊಡ್ಡ ಹಗರಣ ಮಾಡಿದೆ. ಅಷ್ಟೇ ಅಲ್ಲದೆ ದೇಶದ ಇ ಡಿ, ಐ ಟಿ ಯಂತಹ ಸ್ವಾಯತ್ತತಾ ಸಂಸ್ಥೆಗಳನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿದೆ ಎಂದರು. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡ ಜನರ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬರಗಾಲ, ಶಿಕ್ಷಣ ವ್ಯಾಪಾರಿಕರಣ ಇಂತಹ ನೈಜ ಸಮಸ್ಯೆಗಳ ಪರಿಹಾರ ಮಾಡುವುದು ಬಿಟ್ಟು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದೆ. ಈ ಎರಡು ಪಕ್ಷಗಳು ಹೇಗಾದರೂ ಸರಿ ಹೆಚ್ಚು ಸೀಟು ಗೆಲ್ಲುವ ಹವಣಿಕೆ ನಡೆಸಿವೆ ಎಂದರು.
ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಘೋಷಿತ ಅಭ್ಯರ್ಥಿ ರಾಮಲಿಂಗಪ್ಪ ಮಾತನಾಡಿ, ಇಂದು ದೇಶಕ್ಕೆ ಸ್ವತಂತ್ರ ಬಂದು ೭೫ ವರ್ಷ ಕಳೆದರೂ ನಮ್ಮ ಭಾಗದ ನೈಜ ಸಮಸ್ಯೆಗಳಾದ ಗುಳೆ ಸಮಸ್ಯೆ, ಬರಗಾಲ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ನೀರಾವರಿ ಸೌಲಭ್ಯ ಇಂತಹ ಸಮಸ್ಯೆಗಳ ವಿರುದ್ಧ ಯಾವೊಬ್ಬ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಆದ್ದರಿಂದ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷಕ್ಕೆ ಮತ ಹಾಕಿ ಸಂಸತ್ತಿನಲ್ಲಿ ಜನರ ನೈಜ ಸಮಸ್ಯೆ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲು ಅವಕಾಶ ಮಾಡಿಕೊಡಬೇಕು ಎಂದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಚನ್ನಬಸವ ಜಾನೇಕಲ್, ಮಹೇಶ್ ಚೀಕಲಪರ್ವಿ, ರಾಮಣ್ಣ ಎಂ, ಅಣ್ಣಪ್ಪ ಎಸ್ ಹಾಗು ಪಕ್ಷದ ಕಾರ್ಯಕರ್ತರು, ಸದಸ್ಯರು, ಬೆಂಬಲಿಗರು, ಹಿತೈಷಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.