ಸಾಹಿತ್ಯ ಸಮಾಜ ಬದಲಿಸುವ ಅಸ್ತ್ರ
ಧಾರವಾಡ,ಏ8: ಇಂದಿನ ನಮ್ಮ ಮಕ್ಕಳಿಗೆ ಯಾವುದನ್ನು ಹೇಳಿಕೊಡಬೇಕು ಎಂಬುದು ಸವಾಲಾಗಿರುವುದು. ವಚನಕಾರರ ಸಾಹಿತ್ಯದ ರೀತಿಯಲ್ಲಿಇಂದು ಹೇಗಿರಬೇಕಾಗಿದೆ ಎಂದು ನಮ್ಮ ಮಕ್ಕಳಿಗೆ ಹೇಳಿಕೊಡಬೇಕಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕ 50ರ ಸಂಭ್ರಮ ಅಂಗವಾಗಿ ಆಯೋಜಿಸಿದ್ದ ಮಹಿಳಾ ಸಾಹಿತ್ಯ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಚಳುವಳಿಗಳು ಇಲ್ಲದ ಕಾಲಕ್ಕೂ ಯುವ ಬರಹಗಾರರು ಸಮಾಜಮುಖಿಯ ಚಿಂತನೆಯ ಸಾಹಿತ್ಯ ನೀಡುತ್ತಿದ್ದಾರೆ. ಸಾಹಿತ್ಯವು ಸಮಾಜವನ್ನು ಬದಲಿಸುವ ಅಸ್ತ್ರವಾಗಿ ಕೆಲಸ ಮಾಡುತ್ತದೆ. ಯಾವ ಮಾದರಿಯ ಮೂಲಕ ಮಾತನಾಡಿದರೆ ಸಮಾಜದಲ್ಲಿ ಸಂಚಲನ ಆಗುತ್ತದೆ ಎಂಬುದನ್ನು ಗಮನಿಸಬೇಕು. ಸ್ತ್ರೀ ವಾದ ಹೊಸ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡಿರುವಂತಹದ್ದು. ಹೊಸ ವಿಚಾರಧಾರೆಯನ್ನು ನಮ್ಮಕಣ್ಣಿನ ಮೂಲಕ ನೋಡಬೇಕಿದೆ. ಜಾತಿ ವ್ಯವಸ್ಥೆಯ ಸಂಕೀರ್ಣತೆಯಲ್ಲಿ ಮಹಿಳೆಯರೇ ಹೆಚ್ಚು ಶೋಷಿತರಾಗುತ್ತಿರುವುದು. ಈ ಕಾರಣಕ್ಕಾಗಿಯೇ ತಲ್ಲಣಗಳನ್ನು ಸಾಹಿತ್ಯದಲ್ಲಿ ಇಂದಿಗೂ ಮಹಿಳೆ ಹಿಡಿದಿಡುವುದಕ್ಕೆ ಆಗುತ್ತಿಲ್ಲ. ಇಂದು ಚಳುವಳಿಗಳೇ ಇಲ್ಲದ ಈ ಕಾಲಘಟ್ಟದಲ್ಲಿ ನಮ್ಮ ಮಕ್ಕಳನ್ನು ಹೇಗೆ ಮುಖ್ಯವಾಹಿನಿಗೆ ತರಬೇಕು ಎಂಬುದರ ಬಗ್ಗೆ ತಡಕಾಡುತ್ತೇವೆ. ಇಂದಿನ ಮಕ್ಕಳು ಪ್ರಾಧ್ಯಾಪಕರೊಂದಿಗೆ ಯಾಕೆ ಸಂವಹನ ಮಾಡಲು ಆಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದರು.
ಹಾಗೆಯೇ ಸಾಹಿತ್ಯ ಚಟುವಟಿಕೆಗಳಲ್ಲಿ ಮಕ್ಕಳು ಯಾಕೆ ಭಾಗವಹಿಸಲು ಆಸಕ್ತಿ ಇರುವುದಿಲ್ಲ ಎನ್ನುವುದನ್ನು ಮನೋಶಾಸ್ತ್ರದ ಪ್ರಕಾರ ಅಧ್ಯಯನ ಮಾಡದೇ ಇದ್ದರೆ ಸುಮ್ಮನೇ ಮಕ್ಕಳ ಮೇಲೆ ಆಪಾದನೆ ಮಾಡುತ್ತಾ ಹೋಗುತ್ತೇವೆ. ಇವತ್ತಿನ ಯುವಕರ ಮನೋಸ್ಥಿತಿ ಹೇಗಿದೆ ಎಂದು ನೋಡುವಾಗ, ಮೊಬೈಲ್ ಅವರನ್ನು ಕಟ್ಟಿಹಾಕಿದೆ. ಇಡಿಯಾಗಿ ಗ್ರಂಥವನ್ನು ಓದುವ ವ್ಯವದಾನ ನಮ್ಮ ಮಕ್ಕಳಿಗೆ ಇಲ್ಲದಾಗಿದೆ. ಇಂದು ಮಕ್ಕಳಿಗೆ ಕಥೆ ಹೇಳುವ ಸಂಸ್ಕøತಿಯಿಂದ ದೂರ ಇಟ್ಟಿದ್ದೇವೆ. ಕಥೆ ಹೇಳುವ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಂವಹನ ನಡೆಯುತ್ತಿತ್ತು. ಇಂದು ಮೊಬೈಲ್ ಇಲ್ಲದೇ ಮಕ್ಕಳು, ಯುವಕರು ಒಂದು ದಿನವೂ ಇರದಂಥ ಸ್ಥಿತಿಯಲ್ಲಿ ಮಹಿಳಾ ಸಾಹಿತಿಗಳು ಎಂಥ ಸಾಹಿತ್ಯದ ಮೂಲಕ ಮಕ್ಕಳನ್ನು ಓದಿನೆಡೆಗೆ ಆಕರ್ಷಿಸಬಹುದು ಎಂಬುದರ ಬಗ್ಗೆ ಯೋಚಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮಹಿಳೆಯರು ಸಾಹಿತ್ಯ ರಚಿಸುವಾಗ ಅನುಭಾವ ಮುಖ್ಯವಾಗಬೇಕು, ಭಾಷೆಯ ಬಗ್ಗೆ ಆಳವಾದ ಜ್ಞಾನವಿರಬೇಕು ಅಂದಾಗ ಉತ್ತಮ ಸಾಹಿತ್ಯ ಮಹಿಳೆಯರು ನೀಡಲು ಸಾಧ್ಯಎಂದರು.
ಪ್ರಾರಂಭದಲ್ಲಿ ಹುಬ್ಬಳ್ಳಿ ಸಂಗೀತಗಾರ್ತಿ ಶ್ರೀಮತಿ ವಂದನಾ ಸತೀಶ ನೂಲ್ವಿ ಸುಗಮ ಸಂಗೀತ ಪ್ರಸ್ತುತಪಡಿಸಿದರು.
ಶಂಕರ ಹಲಗತ್ತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ಡಾ. ಶೈಲಜಾ ಅಮರಶೆಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ.ಧನವಂತ ಹಾಜವಗೋಳ, ಶ್ರೀಮತಿ ವಿಶ್ವೇಶ್ವರಿ ಹಿರೇಮಠ, ಶಿವಾನಂದ ಭಾವಿಕಟ್ಟಿ, ಡಾ. ಶರಣಮ್ಮ ಗೊರೇಬಾಳ, ಹನುಮಾಕ್ಷಿ ಗೋಗಿ, ಡಾ.ಶಾಂತಾ ಇಮ್ರಾಪೂರ, ಹೇಮಾ ಪಟ್ಟಣಶೆಟ್ಟಿ, ಶಾರದಾ ಕೌದಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.