ನೀರಿನ ಶುದ್ಧೀಕರಣ ಘಟಕಕ್ಕೆ ಜಿಲ್ಲಾಧಿಕಾರಿ ಭೇಟಿ
ಅಳ್ನಾವರ,ಏ8: ಬರಗಾಲದಲ್ಲಿ ಜನರಿಗೆ ಕುಡಿಯುವ ನೀರಿನ ಬವಣೆ ಆಗಕೂಡದು. ಜನರಿಗೆ ಅಗತ್ಯ ಮೂಲಬೂತ ಸೌಲಭ್ಯ ದೊರೆಯಬೇಕು ಎನ್ನುವದು ಸರ್ಕಾರದ ಉದ್ದೇಶವಾಗಿದ್ದು ಅಳ್ನಾವರ ಪಟ್ಟಣಕ್ಕೆ ಕಾಳಿ ನದಿಯಿಂದ ಶುದ್ದ ಕುಡಿಯುವ ನೀರು ಒದಗಿಸುವ ಕಾಳಿ ನದಿ ನೀರಿನ ಜಾಲ ತುಂಬಾ ಉತೃಷ್ಟವಾಗಿದೆ. ಇದೊಂದು ಮಾದರಿ ಯೋಜನೆ ಆಗಿದ್ದರಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ಲಬಿಸಿದೆ ಮತ್ತು ಇಂತಹ ಬರ ಪರಿಸ್ಥಿತಿಯಲ್ಲಿಯೂ ಪಟ್ಟಣಕ್ಕೆ ಸಮರ್ಪಕವಾದ ನೀರು ದೊರೆಯುತ್ತಿರುವದು ಶ್ಲ್ಯಾಘನೀಯವೆಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.
ಕಾಳಿ ನಿದಿಯಿಂದ ನೀರು ತರುವ ಜಾವಳ್ಳಿಯ ನೀರು ಶುದ್ದಿಕರಣ ಘಟಕಕ್ಕೆ ಭೇಟಿ ನೀಡಿ ಅಲ್ಲಿನ ವಿವಿಧ ವಿಭಾಗಗಳ ಕಾರ್ಯದ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಬರ ಪರಿಸ್ಥಿತಿ ನಿರ್ವಹಣೆಗೆ ಜಿಲ್ಲಾಡಳಿತ ಪ್ರಥಮ ಆಧ್ಯತೆ ನೀಡಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ನೀರಿನ ತೊಂದರೆ ಆಗದ ಹಾಗೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಲ ಮಂಡಳಿಯ ಏಂಜೀನಿಯರ್ ಶಿವಾನಂದ ಹಿಂಡಸಗೇರಿ ಮಾಹಿತಿ ನೀಡಿ, ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಕಳೆದ ಎರಡು ವರ್ಷದಿಂದ ಯೋಜನೆ ಅನುಷ್ಟಾನಗೊಂಡಿದೆ. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ದಿನದ 24 ಗಂಟೆ ಜನರಿಗೆ ಶುದ್ದ ಕುಡಿಯುವ ನೀರು ನೀಡಲಾಗುತ್ತಿದೆ. ನೀರಿಗಾಗಿ ಹಿಂದೆ ಅನುಭವಿಸಿದ ಈ ಭಾಗದ ಜನರ ಕಷ್ಟ ದೂರವಾಗಿದೆ. ಜನರಿಗೆ ಯೋಗ್ಯ ದರದಲ್ಲಿ ನೀರು ಸರಭರಾಜು ಮಾಡಲಾಗುತ್ತಿದೆ ಎಂದರು.
ಪಟ್ಟಣದ ಹೊರ ವಲಯದ ಕಾಶೇನಟ್ಟಿ ರಸ್ತೆಯಲ್ಲಿ ಘನ ತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕಸದ ವಿಲೇವಾರಿ, ಸಂಗ್ರಹ, ತ್ಯಾಜ್ಯಗಳ ವಿಂಗಡಣೆ ಹಾಗೂ ಕಾಂಪೋಸ್ಟ ಗೊಬ್ಬರ ತಯಾರಿಸುವ ಸೇರಿದಂತೆ ವಿವಿಧ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಶೌಚಾಲಯ ತ್ಯಾಜ್ಯ ನಿರ್ವಹಣೆಗೆ ಹೊಸದಾಗಿ ರೂಪಿಸಿದ ಯೋಜನೆ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ನಂತರ ಜಿಲ್ಲಾಧಿಕಾರಿಗಳು ಸಮೀಪದ ಕಡಬಗಟ್ಟಿ ಕ್ರಾಸ್ ಬಳಿ ಚುನಾವಣೆ ಪ್ರಯುಕ್ತ ತೆರೆಯಲಾದ ಚೆಕ್ ಪೋಸ್ಟ್‍ಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಎಲ್ಲ ವಾಹನಗಳನ್ನು ತಪಾಸಣೆ ಮಾಡಬೇಕು. ಸಂಶಯ ಬಂದಲ್ಲಿ ಅಗತ್ಯ ಕ್ರಮ ಜರುಗಿಸಬೇಕು. ಸರಿಯಾದ ದಾಖಲೆ ಇದ್ದವರಿಗೆ ಯಾವುದೇ ತೊಂದರೆ ಮಾಡಬೇಡಿ ಎಂದರು.
ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ, ಜಿಲ್ಲಾ ಯೋಜನಾಧಿಕಾರಿ ಬಿ.ಎಸ್. ರಮೇಶ. ತಾಲ್ಲೂಕ ಪಂಚಾಯ್ತಿ ಇಓ ಪ್ರಶಾಂತ ತುರ್ಕಾಣಿ, ಪಿಎಸ್‍ಐ ಪ್ರವೀಣ ನೆಸರಗಿ, ಪ.ಪಂ ಮುಖ್ಯಾಧಿಕಾರಿ ಪ್ರಕಾಶ ಮಗದುಮ್, ನಾಗರಾಜ ಗುರ್ಲಹುಸೂರ, ಎಸ್. ಎಂ. ಬೆಂತೂರ, ಸಂತೋಷಕುಮಾರ ತಳಕಲ್. ಜಿ.ಗೋನಾಳ ಇದ್ದರು.