ದಾರಿ ತಪ್ಪಿದರೂ ಬಾಯಿ ತಪ್ಪಬಾರದು :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಚಿಕ್ಕಮಗಳೂರು.ಏ.೮; ಮಾತಿಗೆ ಒಂದು ಅರ್ಥ ಇದ್ದರೆ ಮೌನಕ್ಕೆ ಹಲವು ಅರ್ಥ. ಮಾತೆಂಬುದು ಜ್ಯೋತಿರ್ಲಿಂಗ. ದಾರಿ ತಪ್ಪಿದರೆ ಮರಳಿ ಸರಿ ದಾರಿಯಲ್ಲಿ ಸಾಗಬಹುದು. ಬಾಯಿ ತಪ್ಪಿ ವಚನ ಭ್ರಷ್ಟರಾದರೆ ಮನುಷ್ಯನ ವ್ಯಕ್ತಿತ್ವಕ್ಕೆ ಗೌರವ ಸಿಗಲಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು  ತಾಲೂಕಿನ ಮುತ್ತಿನಪುರ ವೀರಭದ್ರೇಶ್ವರ ಕ್ಷೇತ್ರದಲ್ಲಿ ಮಂಡಲ ಪೂಜಾ ನಿಮಿತ್ಯ ಜರುಗಿದ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದ ನಂತರ ನಡೆದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಜೀವನದಲ್ಲಿ ಗೆಲ್ಲುತ್ತಾ ಹೋಗುವವನು ಇತಿಹಾಸವನ್ನು ಸೃಷ್ಟಿಸುತ್ತಾನೆ. ಸೋತು ಗೆಲ್ಲುವವನು ಇತಿಹಾಸವನ್ನೇ ಬದಲಾಯಿಸುತ್ತಾನೆ. ಹೃದಯವಂತರ ಹತ್ತಿರ ಮೌನದಿಂದಿರಬೇಕು. ಮೂಢರ ಸಂಪರ್ಕದಿAದ ದೂರದಲ್ಲಿರಬೇಕು. ಆಗಲೇ ಮೌನಕ್ಕೊಂದು ಅರ್ಥ ಮಾತಿಗೊಂದು ಬೆಲೆ ಬರುತ್ತದೆ. ಎಷ್ಟೇ ಒಳ್ಳೆಯವರಾದರೂ ಚುಚ್ಚು ಮಾತನಾಡುವ ಜನರು ಇದ್ದೇ ಇರುತ್ತಾರೆಂದು ಬೇಸರ ಪಟ್ಟುಕೊಳ್ಳಬಾರದು. ಸೂಜಿಯಿಂದ ಹೂವನ್ನು ಪೋಣಿಸುವಾಗ ಹೂವು ನೋವು ಅನುಭವಿಸುವುದು. ನೋವು ಸಹಿಸಿಕೊಂಡಾಗ ಅದು ದೇವರಿಗೆ ಮಾಲೆಯಾಗಿ ಸಮರ್ಪಿತಗೊಳ್ಳುತ್ತದೆ. ಸಂಸ್ಕಾರವAತ ಸಜ್ಜನರಿಂದ ನಮ್ಮ ಬಾಳ ಬದುಕು ಉಜ್ವಲ ಗೊಳ್ಳುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದಲ್ಲಿ ಅಮೂಲ್ಯವಾದ ಆಧ್ಯಾತ್ಮ ಚಿಂತನೆಗಳನ್ನು ಬೋಧಿಸಿದ್ದನ್ನು ಯಾರೂ ಮರೆಯಬಾರದು. ದುಷ್ಟರ ಸಂಹಾರ ಶಿಷ್ಟರ ಸಂರಕ್ಷಣೆಗಾಗಿ ಶ್ರೀ ವೀರಭದ್ರಸ್ವಾಮಿಯಅವತಾರಗೊಂಡಿರುವುದು ಸರ್ವರಿಗೂ ವೇದ್ಯ. ಮುತ್ತಿನಪುರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಪುರಾತನವಾಗಿದ್ದು ಅತ್ಯಂತ ಜೀರ್ಣಗೊಂಡಿತ್ತು. ಈ ಮಲೆನಾಡು ಪ್ರಾಂತ್ಯದ ಎಲ್ಲಾ ಭಕ್ತರ ಸಹಕಾರದಿಂದ ಭವ್ಯ ಸುಂದರ ಶಿಲಾ ದೇಗುಲ ನಿರ್ಮಾಣ ಮಾಡಿರುವುದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದರು.