ಡಾ. ಸಿದ್ದಾರೆಡ್ಡಿ ಸ್ಮರಣೋತ್ಸವ: 35 ರೋಗಿಗಳಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ
ಬೀದರ್: ಏ.8:ಜಿಲ್ಲೆಯ ಜನತೆಗೆ ಸುಮಾರು 50 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದ ಡಾ ಸಿದ್ದಾರೆಡ್ಡಿ ನಮ್ಮನಗಲಿ ಇಂದಿಗೆ 9 ವರ್ಷವಾಯಿತು. ಅವರು ಇರುವಾಗ, ಇಂದಿನ ಕಾಲಕ್ಕೆ ಅನ್ನ, ಆಶ್ರಯಕ್ಕಿಂತ ಆರೋಗ್ಯದ ಅರಿವು ಬಹಳ ಮುಖ್ಯವೆಂದು ತಿಳಿದು, ಅನೇಕ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿ ನಡೆಸಿದರು. ಮುಂದಿನವರಿಗೂ ಆ ದಾರಿಯಲ್ಲಿ ನಡೆಯುವಂತೆ ಸನ್ಮಾರ್ಗ ತೋರಿದರು. ಅವರಿಚ್ಛೆಯಂತೆ ಅವರ ಮಕ್ಕಳು, ಸೊಸೆಯಂದಿರು ಕೂಡ ಡಾ. ಸಿದ್ದಾರೆಡ್ಡಿ ಫೌಂಡೇಶನ್ ಸ್ಥಾಪಿಸಿ ಆದರಡಿಯಲ್ಲಿ ಬಡವರಿಗಾಗಿ ಆರೋಗ್ಯ ಸೇವೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಅವರ ಸ್ಮರಣೆ ನಿಮಿತ್ತ ಪ್ರತಿ ವರ್ಷ ನೂರು ಬಡವರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತ ಬಂದಿದ್ದು, ಈ ವರ್ಷ ಚುನಾವಣೆ ನಿಮಿತ್ಯ 150 ಜನರ ತಪಾಸಣೆ ಹಾಗೂ 35 ಜನರ ಕಣ್ಣಿನ ಪೆÇರೆ ಚಿಕಿತ್ಸೆ ಮಾಡಿ ಲೆನ್ಸ್ ಅಳವಡಿಸಲಾಯಿತು.
ಬೀದರ್ ಜಿಲ್ಲೆ ಅಷ್ಟೇ ಅಲ್ಲದೆ ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ರೋಗಿಗಳು ಚಿಕಿತ್ಸೆ ಪಡೆದರು.
ಡಾ. ಸಿದ್ದಾರೆಡ್ಡಿ ಅವರ ಸೊಸೆ ಡಾ. ವೀಣಾ ಸಿದ್ದಾರೆಡ್ಡಿ ಏಪ್ರಿಲ್ ಮೂರು ಮತ್ತು ನಾಲ್ಕನೇ ತಾರೀಖಿನಂದು ಕಣ್ಣು ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆ ಮಾಡಿದರು. ಡಾ.ನೇಹಾ ಪಾಲವನಕರ್, ನವನಾಥ್, ಅಂಜುಮ್, ಅಂಬಿಕಾ, ಜ್ಯೋತಿ ತಂಡದ ಜೊತೆ ಕಲ್ಬುರ್ಗಿಯ ಯುನೈಟೆಡ್ ಆಸ್ಪತ್ರೆ ಸಿಬ್ಬಂದಿಗಳಾದ ರಾಜೇಶ್ವರಿ, ಮೇಘಾ ಮತ್ತು ರಾಖೇಶ್ ಸಹಕಾರದಿಂದ ಶಿಬಿರ ಯಶಸ್ವಿಯಾಯಿತು ಎಂದು ಫೌಂಡೇಶನ್ ನ ಸಂಚಾಲಕ ಕೆ. ಎಸ್. ಚಳಕಪೂರೆ ತಿಳಿಸಿದ್ದಾರೆ.