ಕೊಡುಗೆ, ಗ್ಯಾರಂಟಿಗಳಿಗಿಂತ ಶಿಕ್ಷಣ, ಆರೋಗ್ಯ ಮುಖ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಏ.08:- ಜನರಿಗೆ ಚುನಾವಣೆ ಕಾಲದ ಉಚಿತ ಕೊಡುಗೆಗಳು, ಗ್ಯಾರಂಟಿಗಳಿಗಿಂತ ಸಮಾನ ಆರೋಗ್ಯ ಮತ್ತು ಶಿಕ್ಷಣ ಅಗತ್ಯವಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಹೇಳಿದರು.
ನಗರದ ಕೆಎಸ್‍ಒಯು ಘಟಿಕೋತ್ಸವ ಭವನದಲ್ಲಿ ಲಯನ್ಸ್ ಅಂತರರಾಷ್ಟ್ರೀಯ ಜಿಲ್ಲೆ 317 ಜಿ ಸಂಸ್ಥೆಯಿಂದ ಭಾನುವಾರ ನಡೆದ ಪ್ರಥಮ ವಾರ್ಷಿಕ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ವ್ಯಕ್ತಿಗೆ ಧೈರ್ಯ, ಮುನ್ನುಗ್ಗುವ ಆಲೋಚನೆಯನ್ನು ಶಿಕ್ಷಣ ನೀಡುತ್ತದೆ. ಆರೋಗ್ಯ ಸದೃಢತೆ ಉತ್ಸಾಹ ನೀಡುತ್ತದೆ. ಸರ್ಕಾರಗಳು ಎಲ್ಲರಿಗೂ ಉಚಿತವಾಗಿ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡಬೇಕು. ಆಗ ಮಾತ್ರ, ದೇಶದ ಪ್ರಗತಿ ಸಾಧ್ಯ ಎಂದರು.
ಇಂದು ಈ ಕ್ಷೇತ್ರಗಳು ವ್ಯಾಪಾರೀಕರಣಕ್ಕೆ ಒಳಗಾಗಿದ್ದು, ನಾಯಕರ ಕಪಿಮುಷ್ಠಿಯಲ್ಲಿವೆ. ಜನರ ನ್ನು ನಿರಂತರವಾಗಿ ವಂಚಿಸುವ ಕೆಲಸವಾಗುತ್ತಿದೆ. ಜಾಗೃತರಾಗದ ಹೊರತು ವಂಚನೆ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಜನರ ಅಗತ್ಯಗಳನ್ನು ಕಡೆಗಣಿಸಿರುವ ಸ್ಥಿತ್ಯಂತರವನ್ನು ಎದುರಿಸುವುದು ಸೇವೆ ಸಲ್ಲಿಸಲು ಹೊರಟವರ ಪ್ರಮುಖ ಕೆಲಸ. ಬಲು ಮುಖ್ಯವಾಗಿ ಅತ್ಯವಶ್ಯಕ ವಿದ್ಯಾರ್ಥಿಗಳಿಗೆ ಶಿಕ್ಷಣದ ನೆರವು ನೀಡಿದರೆ ಪರಿವರ್ತನೆಗೆ ದೊಡ್ಡ ಬಲ ನೀಡಿದಂತಾಗುತ್ತದೆ ಎಂದರು.
ಲಯ್ಸನ್ಸ್ ಸಂಸ್ಥೆ ಪ್ರಪಂಚದಾದ್ಯಂತ ಶಾಖೆಗಳನ್ನು ಹೊಂದಿದ್ದು, ಜನರಿಗೆ ಸೇವೆ ಒದಗಿಸುವ ಗುರಿ ಹೊಂದಿರುವುದು ಸಂತಸದ ಸಂಗತಿ. ವ್ಯಕ್ತಿ ಸ್ವಾತಂತ್ರ್ಯ, ಬುದ್ಧಿವಂತಿಕೆ, ಐಕ್ಯತೆ ಕುರಿತು ಸಂಸ್ಥೆಯ ನಿಲುವು ಮತ್ತು ಕೆಲಸಗಳು ಇನ್ನಷ್ಟು ಪ್ರಖರವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.
1200 ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು, 317ಎ, 317 ಇ, 317 ಎಫ್ ಮಾಜಿ ಲಯನ್ ಗಳು ಪಾಲ್ಗೊಂಡು ಕಂಪ್ಯೂಟರ್ ವಿತರಿಸಿದ್ದು, ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗೆ ಸ್ಯಾನಿಟರಿ ಪಾಡ್ ಮಿಷನ್ ನೀಡಿದ್ದೇವೆ. ಮತ್ತೊಂದು ಸೇವಾ ಸಂಸ್ಥೆಗೆ ಒಂದು ಯಂತ್ರೋಪಕರಣ, ಕಬ್ಬಡಿಯಲ್ಲಿ ಪಾಲ್ಗೊಳ್ಳುವ ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ವಸ್ತ್ರ ಹಾಗೂ ಶೂ ನೀಡಿದ್ದೇವೆ. ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ 15 ಸಾವಿರ ರೂ., ಐದು ತಳ್ಳುವ ಗಾಡಿ ವಿತರಿಸಿದ್ದೇವೆ. ಐದು ಹೊಲಿಗೆ ಯಂತ್ರ ವಿತರಿಸಲಾಗಿಯಿತು ಎಂದು ಜಿಲ್ಲಾ ಗವರ್ನರ್ ಲಯನ್ ಎನ್.ಕೃಷ್ಣೇಗೌಡ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್, ಸಂಸ್ಥೆ ಜಿಲ್ಲಾ ಗವರ್ನರ್ ಎನ್.ಕೃಷ್ಣೇ ಗೌಡ, ಪ್ರಮುಖರಾದ ವಿ.ವಿ.ಕೃಷ್ಣಾ ರೆಡ್ಡಿ, ಬಿ.ಎಸ್.ರಾಜಶೇಖರಯ್ಯ, ಮಾಜಿ ಗವರ್ನರ್ ಕೆ.ದೇವೇಗೌಡ, 317 ಜಿ ಸಂಸ್ಥೆ ಪದಾಧಿಕಾರಿಗಳಾದ ಕೆ.ದೇವೇಗೌಡ, ಎನ್.ಸುಬ್ರಹ್ಮಣ್ಯ, ಕೆ.ಎಲ್.ರಾಜಶೇಖರ್, ಟಿ.ಎಚ್.ವೆಂಕಟೇಶ್, ಕೆ.ಕಾಂತರಾಜು, ಆನಂದ್ ಭಾಗವಹಿಸಿದ್ದರು.