ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಸಂಜೆವಾಣಿ ವಾರ್ತೆ
ಹನೂರು ಸೆ 20 :- ತಾಲೂಕಿನ ಪಾಲಾರ್ ಗ್ರಾಮದಲ್ಲಿ ವಾಸವಾಗಿರುವ ಸೋಲಿಗ ಜನಾಂಗದವರು ಮನೆ ನಿರ್ಮಾಣ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪಾಲರ್ ವಲಯ ವ್ಯಾಪ್ತಿಯ ಉಪವಲಯ ಅರಣ್ಯಾಧಿಕಾರಿ ಭೋಜಪ್ಪ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಸೋಲಿಗ ಜನಾಂಗದವರಿಗೆ ಸರ್ಕಾರದಿಂದ 18 ಮನೆ ಮಂಜೂರಾಗಿದ್ದು ಎಲ್ಲಾ ಫಲಾನುಭವಿಗಳು ಮನೆ ನಿರ್ಮಾಣದ ಆಡಿಪಾಯ ಕಾಮಗಾರಿ ಪೂರ್ಣಗೊಂಡು ನಂತರ ಸರ್ಕಾರದಿಂದ ಮೊದಲ ಕಂತು ಅನುದಾನ ಬಿಡುಗಡೆಯಾಗಿದೆ.
ಕಷ್ಟಪಟ್ಟು ಮನೆ ನಿರ್ಮಾಣ ಮಾಡುತ್ತಿರುವ ಸೋಲಿಗರನ್ನೂ ಮನೆಯ ಗೋಡೆ ಕಟ್ಟಬೇಡಿ ಎಂದು ತಡೆಹಿಡಿದ ಮಲೆ ಮಹದೇಶ್ವರ ವನ್ಯಜೀವಿ ವಲಯದ ವ್ಯಾಪ್ತಿಯ ಪಾಲಾರ್ ವಲಯದ ಉಪವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೋಜಪ್ಪ ಕಿರುಕುಳ ನೀಡಿ ಸುಮಾರು ಒಂದು ತಿಂಗಳುಗಳ ಕಾಲ ಕಾಮಗಾರಿಗೆ ಅವಕಾಶ ಮಾಡಿಕೊಡದೆ ತೊಂದರೆ ನೀಡಿದ್ದಾರೆ.
ಸೋಲಿಗ ನಿವಾಸಿಗಳೆಲ್ಲರೂ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ವಲಯ ಅರಣ್ಯಾಧಿಕಾರಿ ಭೋಜಪ್ಪ ಅವರನ್ನು ಕೇಳಿಕೊಂಡಾಗ ಪ್ರತಿ ಮನೆಯವರು ಒಂದೊಂದು ಸಾವಿರದಂತೆ 18 ಸಾವಿರ ನೀಡುವಂತೆ ಲಂಚಕ್ಕೆ ಬೇಡಿಕೆ ಇಡುತ್ತಾರೆ. ಈ ಬಗ್ಗೆ ಪಾಲಾರ್ ಗ್ರಾಮದ ಫಲಾನುಭವಿ ಮುರುಗೇಶ್ ಎಂಬ ವ್ಯಕ್ತಿಯು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಚಾಮರಾಜನಗರ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥೂಸ್ ರವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಗಳಾದ ಲೋಹಿತ್, ಶಶಿಕುಮಾರ್ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಉಪ ವಲಯ ಅರಣ್ಯ ಅಧಿಕಾರಿ ಭೋಜಪ್ಪ ರವರನ್ನು ಬುಧವಾರ ಸಂಜೆ 6 ಗಂಟೆಯ ವೇಳೆ ಹಣದ ಸಮೇತ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ . ಈ ಸಂಬಂಧ ಈಗಾಗಲೇ ಲೋಕಾಯುಕ್ತ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾಳಿಯಲ್ಲಿ ಪೇದೆ ಗೌತಮ್, ಮಹಾಲಿಂಗ ಸ್ವಾಮಿ, ಮಹಾದೇವ ಸ್ವಾಮಿ ಸೇರಿದಂತೆ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಪಾಲ್ಗೊಂಡಿದ್ದರು.