ದಾವಣಗೆರೆ ಕಾಂಗ್ರೆಸ್ ಪಾಳಯದಲ್ಲಿ ಶಮನವಾಗದ ಬಂಡಾಯ; ಸಿಎಂ ಸಂಧಾನ ವಿಫಲ
ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೮; ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಅಹಿಂದ ಯುವ ನಾಯಕ, ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಕರ್ನಾಟಕ ರಾಜ್ಯ ಔಟ್ರೀಚ್ ಘಟಕದ ಉಪಾಧ್ಯಕ್ಷ ವಿನಯ್ ಕುಮಾರ್ ಅವರು ಬಂಡಾಯ ಶಮನವಾಗಿಲ್ಲ. ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಕಾಗಿನೆಲೆ ಶ್ರೀಗಳ ಜೊತೆ ಭೇಟಿ ಮಾಡಿದ ಬಳಿಕ ವಿಡಿಯೋ ಬಿಡುಗಡೆ ಮಾಡಿರುವ ವಿನಯ್ ಕುಮಾರ್ ಅವರು, ಕೆಲವೆಡೆ ಈಗಾಗಲೇ ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ನ ಬಂಡಾಯ ಶಮನವಾಗಿದೆ, ವಿನಯ್ ಕುಮಾರ್ ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತು ಹರಿದಾಡುತ್ತಿದೆ. ಸದ್ಯಕ್ಕೆ ಈ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ರಾಜಕೀಯ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ನಾನು ಪಕ್ಷೇತರನಾಗಿ ಕಣಕ್ಕಿಳಿಯಬೇಕೆಂದು ಅಪೇಕ್ಷೆ ಪಡುತ್ತಿದ್ದಾರೆ. ನಾನು ಇನ್ನೂ ಮುಂಚೆ ಹೇಳಿದ ಹಾಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಜನಾಭಿಪ್ರಾಯ ಸಂಗ್ರಹ ಮಾಡುವುದು ಬಾಕಿ ಇದೆ. ಮಾಯಕೊಂಡ, ದಾವಣಗೆರೆ ಉತ್ತರ ಕ್ಷೇತ್ರದಲ್ಲಿನ ಜನರು, ಮತದಾರರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ಇದಾದ ಬಳಿಕ ನಾನೇ ಪತ್ರಿಕಾಗೋಷ್ಠಿ ಕರೆದು ಅಂತಿಮ ನಿರ್ಧಾರ ತಿಳಿಸುತ್ತೇನೆ. ದಯವಿಟ್ಟು ಬಂಡಾಯ ಶಮನವಾಯ್ತು, ನನ್ನ ಪಕ್ಷೇತರ ಸ್ಪರ್ಧೆ ಮಾಡಬೇಕೆಂಬ ಬಯಕೆ ಶಮನವಾಯ್ತು ಎಂದುಕೊಳ್ಳಬೇಡಿ. ನಾನು ಬರುತ್ತೇನೆ, ನಿಮ್ಮನ್ನು ಕಾಣುತ್ತೇನೆ ಎಂದು ವಿನಯ್ ಕುಮಾರ್ ಹೇಳುವ ಮೂಲಕ ನಿಗೂಢ ಹೆಜ್ಜೆ ಇಟ್ಟಿದ್ದಾರೆ.