ದುಷ್ಟ, ಭ್ರಷ್ಟ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಲ್ಲ:ಅಶೋಕ
ಬೀದರ್:ಏ.7: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುಷ್ಟ, ಭ್ರಷ್ಟ ಆಡಳಿತ ನೀಡುತ್ತಿದೆ. ಇದು ಲಂಚ ಹೊಡೆಯುವ ಮೀಟರ್ ಸರ್ಕಾರವಾಗಿದೆ. ಹತ್ತು ತಿಂಗಳ ಅವಧಿಯಲ್ಲೇ ಈ ಸರ್ಕಾರ ಜನರಿಂದ ಸಂಪೂರ್ಣ ತಿರಸ್ಕøತವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ನಮ್ಮ ಶಕ್ತಿ ವೃದ್ಧಿಯಾಗಿದೆ. ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೂ ಸ್ಥಾನ ಗೆಲ್ಲಬಾರದು. ಇದಕ್ಕಾಗಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡೋಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ನಗರದ ಶಿವನಗರದಲ್ಲಿರುವ ಕೇಂದ್ರ ಸಚಿವ, ಬಿಜೆಪಿ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಅವರ ನಿವಾಸದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಬಿಜೆಪಿ-ಜೆಡಿಎಸ್ ಮುಖಂಡರ ಸಮನ್ವಯ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜನತೆ ಇಂಥ ಕೆಟ್ಟ, ಭ್ರಷ್ಟ ಸರ್ಕಾರ ಯಾವತ್ತೂ ನೋಡಿಲ್ಲ. ಕಳೆದ ಬಾರಿ ಗೆದ್ದಿದ್ದ ಬೆಂಗಳೂರು ಗ್ರಾಮಾಂತರದಲ್ಲೂ ಕಾಂಗ್ರೆಸ್ ಸೋಲಲಿದೆ. ಅಲ್ಲಿನ ನಮ್ಮ ಅಭ್ಯರ್ಥಿ ಡಾ.ಮಂಜುನಾಥ ಭರ್ಜರಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿಯಿಂದ ಹೊಸ ಅಲೆ ಸೃಷ್ಟಿಯಾಗಿದೆ. ದೇಶಕ್ಕೆ ಮೋದಿ ಅವರೆÉೀ ಬೇಕು ಎಂಬುದು ಜನರ ನಿರ್ಧಾರವಾಗಿದೆ. ನಮ್ಮ ಮೈತ್ರಿಯು ಹಾಲು-ಜೇನು ತರಹವಿದೆ. ಇದು ಉತ್ತಮ ಸಮ್ಮಿಲನ. ಕಾಂಗ್ರೆಸ್‍ಗೆ ಸೋಲಿಸುವ ಹುರುಪು ಬಿಜೆಪಿ ಜೊತೆಗೆ ಜೆಡಿಎಸ್‍ನವರಲ್ಲೂ
ಸಾಕಷ್ಟಿದೆ. ಸಮಾಜ ಒಡೆಯುವ, ದೇಶ ಒಡೆಯುವ ಮನಸ್ಥಿತಿಯುಳ್ಳ ಕಾಂಗ್ರೆಸ್ ತಕ್ಕ ಪಾಠ ಕಲಿಸಲು ಈಗ ಕಾಲ ಬಂದಿದೆ. ಮೈತ್ರಿ ಮಾಡಿಕೊಂಡಿದ್ದರಿಂದ ಏನೂ ಆಗಲ್ಲ ಎಂದು ಕಾಂಗ್ರೆಸ್‍ನವರು ನಮಗೆ ಟಾಂಗ್ ನೀಡುತ್ತಿದ್ದಾರೆ. ಮೈತ್ರಿಯಿಂದ ಏನಾಗಲಿದೆ ಎಂದು ಹಿಯಾಳಿಸಿ, ಛೇಡಿಸಿ ಮಾತನಾಡುತ್ತಿದ್ದಾರೆ. ಅವರಿಗೆ ನಮ್ಮ ತಾಕತ್ತು ತೋರಿಸಬೇಕಿದೆ. ಡಿ.ಕೆ.ಸುರೇಶ್ ಸ್ಪರ್ಧಿಸುವ ಕ್ಷೇತ್ರದಲ್ಲಿ ಸಹ ಇಂದು ಕಾಂಗ್ರೆಸ್ ಪರವಾಗಿ ಬೆಟ್ ಕಟ್ಟಲು ಯಾರೂ ರೆಡಿಯಿಲ್ಲ. ಇದು ಕಾಂಗ್ರೆಸ್ ದುಸ್ಥಿತಿಗೆ ನಿದರ್ಶನ ಎಂದರು.
ರಾಜಣ್ಣ ಹೇಳಿಕೆಗೆ ಆಕ್ರೋಶ:
ಮೋದಿ ಪ್ರಧಾನಿ ಆಗೇ ಆಗ್ತಾರೆ. ಅವರಿಗೆ ಈಶ್ವರನ ಆಶೀರ್ವಾದ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಆದರೆ ಸಚಿವ ರಾಜಣ್ಣ ಅವರು ದೇವೇಗೌಡರಿಗೆ ಸಾಯುವ ವಯಸ್ಸು ಎಂದು ಹೇಳುತ್ತಾರೆ. ನಾಚಿಕೆ ಬರಬೇಕು. ಮಾನವೀಯತೆ ಇದೆಯಾ?
ಸೋಲಿನ ಭಯದಿಂದ ಕಾಂಗ್ರೆಸ್‍ನವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ ಅಶೋಕ್ ಅವರು, ಬಿಜೆಪಿ-ಜೆಡಿಎಸ್
ನಡುವೆ ಒಂದಿಷ್ಟು ಸಣ್ಣಪುಟ್ಟ ಗೊಂದಲಗಳೂ ಬರಬಾರದು. ಇಲ್ಲಿ ಖೂಬಾ ಅಲ್ಲ ಮೋದಿ, ಕಮಲ ಚುನಾವಣೆಗೆ ಸ್ಪರ್ಧಿಸಿದೆ ಎಂದು ತಿಳಿದು ಎಲ್ಲರೂ ಕೆಲಸ ಮಾಡಬೇಕು. ಖೂಬಾ ಕೇವಲ ಮೋದಿ ಅವರ ರಾಯಭಾರಿ. ಈ ವಿಚಾರಧಾರೆಯಲ್ಲಿ ಕೆಲಸ ಮಾಡಿದಾಗ ಭರ್ಜರಿ ಲೀಡ್‍ನಿಂದ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಬೀದರ್ ಅಭಿವೃದ್ಧಿಗಾಗಿ ಖೂಬಾ ಬೇಕು:
ತೀಸ್ರಿ ಬಾರ್ ತೀನ್ ಲಾಖ್ ಪಾರ್:
ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಾತನಾಡಿ, ಈ ಚುನಾವಣೆಯಲ್ಲಿ ಅಹಂಕಾರ ಸೋಲಿಸಿ ಸರಳತೆಯಿಂದಿರುವ ನನಗೆ ಗೆಲ್ಲಿಸಬೇಕಿದೆ. ಭ್ರಷ್ಟಾಚಾರಿ, ಅಪಾರದರ್ಶಕಕ್ಕೆ ಸೋಲಿಸಿ ಪಾರದರ್ಶಕನಾಗಿರುವ ನನಗೆ ಗೆಲ್ಲಿಸಬೇಕಿದೆ. ಜನಸ್ಪಂದನೆ ಮಾಡದವರಿಗೆ ಸೋಲಿಸಿ ಸದಾ ಜನರ ಮಧ್ಯೆ ಇರುವ ನನಗೆ ಗೆಲ್ಲಿಸಬೇಕಿದೆ. ನನ್ನ ಗೆಲುವು ಶತಸಿದ್ಧವಿದೆ. ಆದರೆ ಲೀಡ್ ಕನಿಷ್ಠ ಮೂರು ಲಕ್ಷ ಇರಬೇಕು. ಅಂದಾಗಲೇ ನಮ್ಮೆಲ್ಲರ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಮೈತ್ರಿಯು ಸಹಜವೇ ನಮ್ಮ ಶಕ್ತಿ ಹೆಚ್ಚಿಸಿದೆ. ಬಿಜೆಪಿ ಹಿರಿಯಣ್ಣನಂತೆ. ನಾವು ಗೆಲ್ಲಲು ಜೆಡಿಎಸ್ ಬೆನ್ನಿಗೆ ನಿಂತಿದೆ. ಜೆಡಿಎಸ್‍ನವರಿಗೆ ಗೌರವ, ಸಹಕಾರ ನೀಡುವುದು ನಮ್ಮವರ ಆದ್ಯ ಕರ್ತವ್ಯ. ಅವರ ಮತಗಳೆಲ್ಲವೂ ನಮಗೆ ಬರುವಂತೆ ನೋಡಿಕೊಳ್ಳಬೇಕಿದೆ. ಅವರಿಗೆ ಎಲ್ಲ ರೀತಿಯ ಸಹಕಾರ, ಸಹಾಯ ನೀಡಿ ಸಮನ್ವಯತೆ ಸಾಧಿಸಿ ಕೆಲಸ ಮಾಡೋಣ. ಎಲ್ಲ ಕಾರ್ಯಕ್ರಮಗಳನ್ನು ಬಗ್ಗೆ ಪರಸ್ಪರರು ಮಾಹಿತಿ ಹಂಚಿಕೊಂಡು ಜಂಟಿಯಾಗಿ ಪ್ರಚಾರ ನಡೆಸೋಣ. ಕಾಂಗ್ರೆಸ್‍ನವರು ಬಹಳ ಅಹಂಕಾರದಲ್ಲಿದ್ದಾರೆ. ಅವರ ಅಹಂಕಾರಕ್ಕೆ ಮುಕ್ತಿ ನೀಡುವ ಸಮಯ ಬಂದೊದಗಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಎರಡೂ ಪಕ್ಷಗಳ ನಾಯಕರಲ್ಲಿ ಸಮನ್ವಯತೆ ಗಟ್ಟಿಯಾಗಿದೆ. ಉತ್ತಮ ಸಮಾಜ ನಿರ್ಮಾಣ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಚಿಂತನೆಯಡಿ ಪಕ್ಷದ ಹಿರಿಯರೆಲ್ಲರೂ ಸೇರಿ ಮೈತ್ರಿಗೆ ಸೈ ಎಂದಿದ್ದಾರೆ. ಇದರಿಂದ ನಮ್ಮ ಬಲ ಹೆಚ್ಚಾಗಿದೆ. ಕಾರ್ಯಕರ್ತರು ಸಹ ಸಮನ್ವಯತೆಯನ್ನು ಸಾಧಿಸಿ ಜಂಟಿ ಕಾರ್ಯಾಚರಣೆ ಮಾಡಿದರೆ ಈ ಸಲ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಮೂರು ಲಕ್ಷ ಲೀಡ್‍ನಿಂದ ಗೆಲ್ಲುವುದು ಖಚಿತ. ತೀಸ್ರಿ ಬಾರ್ ತೀನ್ ಲಾಖ್ ಪಾರ್ ಗುರಿಯನ್ನು ನಾವು ಸಾಕಾರ ಮಾಡೋಣ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ
ಕಾಂಗ್ರೆಸ್ ನಾಯಕರಿಗೆ ನಡುಕ
ಎಲ್ಲೆಡೆ ಬರ ಆವರಿಸಿದೆ. ಕುಡಿಯುವ ನೀರಿನ ದಾಹ ಎದ್ದಿದೆ. ಜಾನುವಾರುಗಳಿಗೆ ಮೇವಿಲ್ಲ. ಕರೆಂಟ್ ಇಲ್ಲ. ಆದರೆ ಕಾಂಗ್ರೆಸ್‍ನವರು ಮಾತ್ರ ಚೆನ್ನಾಗಿ ಮೇಯುತ್ತಿದ್ದಾರೆ. ಕ್ಷಣ-ಕ್ಷಣಕ್ಕೂ ಲಂಚ ಹೊಡೆಯುತ್ತಿರುವ ಮೀಟರ್ ಸರ್ಕಾರ ಇದಾಗಿದೆ. ಸಿದ್ಧರಾಮಯ್ಯ ಅವರು ಪೆಟ್ರೋಲ್ ಇಲ್ಲದೆ ಬೆಂಕಿ ಹಚ್ಚುವ ಗುಣ ಹೊಂದಿದ್ದಾರೆ. ಕಾಂಗ್ರೆಸ್‍ಗೆ ಹೀನಾಯ ಸೋಲು ಕಟ್ಟಿಟ್ಟ ಬುತ್ತಿ. 400 ಸ್ಥಾನಗಳೊಂದಿಗೆ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ.
-ಆರ್.ಅಶೋಕ್
ವಿಧಾನಸಭೆ ವಿರೋಧ ಪಕ್ಷದ ನಾಯಕರು