ಜನರಲ್ಲಿ ಚುನಾವಣೆ ಜಾಗೃತಿ ಮೂಡಿಸಲು ಯುವ ಜನಾಂಗ ಮುಂದಾಗಬೇಕು: ಕೋರಿ
ವಿಜಯಪುರ,ಏ.7:ಭಾರತದ ಯುವ ಜನಾಂಗವು ಚುನಾವಣೆಯ ಮಂಚೂಣಿಯಲ್ಲಿರಬೇಕು. ಜನರಲ್ಲಿ ಚುನಾವಣೆ ಕುರಿತು ಜಾಗೃತಿ ಮೂಡಿಸುವುದರÀಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಡಾ. ಎಂ.ಬಿ. ಕೋರಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಶಿಕ್ಷಣ ಅಧ್ಯಯನ ವಿಭಾಗದಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಿದ್ದ ‘ಚುನಾವಣೆ ಮತ್ತು ಯುವ ಜನತೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ಚುನಾವಣೆಯಲ್ಲಿ ಮತ ಚಲಾಯಿಸುವುದರ ಜೊತೆಗೆ ತಮ್ಮ ಪರಿಸರದಲ್ಲಿ ಸ್ವಯಂ ಸೇವಕರಾಗಿ ಪಾತ್ರ ನಿರ್ವಹಣೆ ಮಾಡಬೇಕು. ಅಂದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವ ಗಟ್ಟಿಯಾಗಲು ಸಾಧ್ಯ. ಸಮಾಜವನ್ನು ಯಶಸ್ವಿಯ ದಾರಿಯೆಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಚುನಾವಣೆಯ ಸಿದ್ಧತೆಗಳ ಬಗ್ಗೆ ಪರಿಚಯ ಮಾಡಿಸಿ, ಮತ ಚಲಾವಣೆಯಲ್ಲಿರುವ ನ್ಯೂನ್ಯತೆಗಳನ್ನು ಮತ್ತು ವಹಿಸಬೇಕಾದ ಮುಂಜಾಗ್ರತೆಯ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವಿಯ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವಿಷ್ಣು ಶಿಂದೆ ವಹಿಸಿ ಮಾತನಾಡಿ, ಚುನಾವಣೆ ಈ ಪ್ರಜಾಪ್ರಭುತ್ವದ ಹಬ್ಬ ಇದ್ದಂತೆ. ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮತದಾನ ಜಾಗೃತೆಯ ಘೋಷಣೆಗಳನ್ನು ಹಾಕಿದರು. ತಮ್ಮ ಸಮುದಾಯದಲ್ಲಿ ಈ ಅರಿವು ಮೂಡಿಸಲು ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಯು.ಕೆ. ಕುಲಕರ್ಣಿ, ಡಾ. ಪ್ರಕಾಶ ಸಣ್ಣಕ್ಕನವರ, ಡಾ. ಅಶೋಕುಮಾರ ಸುರಪುರ, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಬಿ.ಎಡ್ ವಿದ್ಯಾರ್ಥಿನಿಯರು ಎನ್.ಎಸ್.ಎಸ್. ಗೀತೆಯನ್ನು ಹಾಡಿದರು. ಪುಷ್ಪಾ ಇಂಡಿ ಪರಿಚಯಿಸಿದರು, ಸುಜಾತಾ ರಾಠೋಡ ನಿರೂಪಿಸಿದರು.