ಮಹಿಳಾ ಸಮಾನತೆ ಅನುಸರಿಸಿದ ಹಿರಿಮೆ ಶರಣರಿಗೆ ಸಲ್ಲುತ್ತದೆ: ಗಂಗಾಶ್ರೀ
ಅಫಜಲಪುರ: ಏ.7:ಮಾನವ ನಾಗರಿಕತೆಯ ಆರಂಭದಿಂದ ನಡೆದು ಬಂದ ಮಹಿಳಾ ದೌರ್ಜನ್ಯವನ್ನು ವಿರೋಧಿಸಿ, ಮಹಿಳಾ ಸಮಾನತೆಯನ್ನು ಸಾರಿ ಅನುಸರಿಸಿದ ಹಿರಿಮೆ ಶರಣರಿಗೆ ಸಲ್ಲುತ್ತದೆ ಎಂದು ಡಾ. ಗಂಗಾಶ್ರೀ ಅನಂತಪುರ ಅವರು ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ನಡೆದ ತಿಂಗಳ ಶರಣ ಸಂಗಮ ಕಾರ್ಯಕ್ರಮದಲ್ಲಿ “ಶರಣರು ಕಂಡಂತೆ ಮಹಿಳೆ” ವಿಷಯದ ಕುರಿತು ಅನುಭಾವ ನೀಡುತ್ತಾ ಮಾತನಾಡಿದ ಅವರು, “ಶರಣರು ಮಹಿಳೆಯರ ಕುರಿತು ಕೇವಲ ಮಾತನಾಡಲಿಲ್ಲ. ಆಡಿದ್ದನ್ನು ಮಾಡಿ ತೋರಿಸಿದರು. ಜಗತ್ತಿನೆಲ್ಲೆಡೆ ಸಂವಿಧಾನಗಳು ರಚನೆಯಾಗಿ ಮಹಿಳಾ ಸಮಾನತೆಯ ಚರ್ಚೆಗಳು ಆರಂಭವಾಗುವ ನೂರಾರು ವರ್ಷಗಳ ಮುಂಚೆಯೇ ಶರಣರು ಮಹಿಳಾ ಸಮಾನತೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಭಾರತೀಯ ಬಸವ ಬಳಗ, ಬಸವ ಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಅಫಜಲಪುರ ಇವರ ಸಹಯೋಗದಲ್ಲಿ ಈ ತಿಂಗಳ ‘ಶರಣ ಸಂಗಮ’ ಕಾರ್ಯಕ್ರಮವು ‘ಅಂತರಾಷ್ಟ್ರೀಯ ಮಹಿಳಾ ದಿನ’ದ ನಿಮಿತ್ಯವಾಗಿ ಮಹಿಳಾ ಪ್ರಧಾನ ವಿಚಾರಗಳೊಂದಿಗೆ ನಡೆಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಶರಣೆ ಮಹಾನಂದಾತಾಯಿ ಹಿರೇಮಠ ಮುಗಳಿ ಅವರು “ಶರಣರ ವಚನಗಳ, ವಿಚಾರಗಳ ಭಾಷಣಗಳನ್ನು ಕೇಳುವುದಕ್ಕಿಂತ, ಶರಣರ ವಿಚಾರಧಾರೆಗಳು ಚರ್ಚೆಯಾಗಬೇಕು. ಪರಸ್ಪರ ಚರ್ಚೆಗಾಗಿ ನಾವು ವಚನ ಸಾಹಿತ್ಯವನ್ನೇ ಆಧಾರವಾಗಿಟ್ಟುಕೊಂಡು ಉತ್ತರಗಳನ್ನು ಹುಡುಕಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆ ಬೇಬಿನಂದಾ ಚಂದ್ರಕಾಂತ ಮ್ಯಾಳೆಸಿ ಅವರು ವಹಿಸಿದ್ದರು. ಸಿದ್ದಮ್ಮ ಬಸವರಾಜ ಸಿರಗೂರ ಅವರು ಷಟಸ್ಥಲ ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಪೂಜಾ ವೆಂಕಟೇಶ ಖೇಳಗಿ ಭಾಗವಹಿಸಿದ್ದರು. ಮೃತ್ಯುಂಜಯ ಕಳ್ಳಿಮಠ, ಡಾ. ಸಿ.ವಿ. ಟಕ್ಕಳಕಿ, ಜಗದೇವಪ್ಪ ಅಂಜುಟಗಿ, ಸದಾಶಿವ ಮೇತ್ರಿ, ಅಮೃತರಾವ ಪಾಟೀಲ, ಸಿದ್ದನಗೌಡ ಮಾಲಿಪಾಟೀಲ, ಶಂಕರಪ್ಪ ಮಣೂರ, ಬಸವರಾಜ ಕೆಂಗನಾಳ, ಬಸವರಾಜ ಉಪ್ಪಾರ, ಮಹೇಶ ಆಲೇಗಾಂವ್, ಬಾಹುಬಲಿ ಮಾಲಗತ್ತಿ, ಮುರುಗೇಂದ್ರ ಮಸಳಿ, ರವಿಚಂದ್ರ ಅತನೂರ, ಶಿವನಗೌಡ ಪಾಟೀಲ, ಪುಷ್ಪಾ ಟಕ್ಕಳಕಿ, ಪಾರ್ವತಿ ಮೇತ್ರಿ, ಮಹಾನಂದ ಮಾಲಿಪಾಟೀಲ, ಸುಮಿತ್ರಾ ಮೇತ್ರಿ, ಶಾಂತಾಬಾಯಿ ಉಪ್ಪಾರ, ಸುನಂದಾ ಪಾಟೀಲ, ಲಕ್ಷ್ಮೀ ಅಂಜುಟಗಿ ಹಾಗೂ ಇತರರು ಉಪಸ್ಥಿತರಿದ್ದರು. ಶಾಂತಿಪ್ರಿಯ ಕೊಡೆಕಲ್ ಅವರು ವಚನ ಸಂಗೀತ ನಡೆಸಿಕೊಟ್ಟರು. ಅದಿತಿ ಶಾಂತಪ್ಪ ಅಂಜುಟಗಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಂಗೀತಾ ವೆರ್ಣೇಕರ್ ಸ್ವಾಗತಿಸಿದರು. ಅರ್ಚನಾ ಜೈನ್ ನಿರೂಪಿಸಿದರು. ವಿಜಯಲಕ್ಷ್ಮಿ ಆಲೆಗಾಂವ್ ವಂದಿಸಿದರು.