ಕಾಮಗಾರಿ ಪರಿಶೀಲನೆ
ಲಕ್ಷ್ಮೇಶ್ವರ,ಏ.7:ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಶನಿವಾರ ಗದಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಭರತ್ ಅವರು ಪರಿಶೀಲನೆ ನಡೆಸಿದರು.
ಅವರು ಬರದ ಹಿನ್ನೆಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಆರಿಸಿ ಗುಳೇ ಹೋಗಬಾರದು ಸ್ಥಳೀಯವಾಗಿ ಉದ್ಯೋಗ ಒದಗಿಸಬೇಕು ಎಂಬ ಉದ್ದೇಶದಿಂದ ನರೇಗಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು ಕೃಷಿ ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸ್ಥಳದಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕೃಷಿ ಕೂಲಿ ಕಾರ್ಮಿಕರಿಗೆ ಕುಡಿಯುವ ನೀರು ಆರೋಗ್ಯ ತಪಾಸಣೆ ವಿಶ್ರಾಂತಿಗಾಗಿ ನೆರಳಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು ನರೇಗಾ ಕಾಮಗಾರಿಯಲ್ಲಿ ಸುಮಾರು 2,000ಕ್ಕೂ ಹೆಚ್ಚು ಕೃಷಿ ಕೂಲಿ ಕಾರ್ಮಿಕರು ಉದ್ಯೋಗದಲ್ಲಿ ನಿರತರಾಗಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹುನಗುಂದ ಕಾರ್ಯದರ್ಶಿ ವೈ ಡಿ ಮಾದರ್ ನರೇಗಾ ಇಂಜಿನಿಯರ್ ಶ್ರೀನಿವಾಸ ಕಲಾಲ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.