ಬಿಜೆಪಿಗೆ ಮತ ನೀಡುವಂತೆ ಜೆಡಿಎಸ್ ನಾಯಕರ ಮನವಿ
ಸಂಜೆವಾಣಿ ನ್ಯೂಸ್
ಮೈಸೂರು.ಏ.07:- ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಮೈಸೂರು- ಕೊಡಗು ಕ್ಷೇತ್ರ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಮತದಾರರು ಮತ ನೀಡಬೇಕೆಂದು ಜೆಡಿಎಸ್‍ನ ಮಾಜಿ ಶಾಸಕ ಹಾಗೂ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷ ಅನ್ನದಾನಿ ಮನವಿ ಮಾಡಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಬಾಲರಾಜು ಈ ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಕೇವಲ ಗ್ಯಾರೆಂಟಿ ಹೆಸರು ಹೇಳಿಕೊಂಡು ಆಡಳಿತ ನಡೆಸುತ್ತಿದೆ. ಗ್ಯಾರೆಂಟಿಗಳೇ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ವೇಳೆ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ದಲಿತರಿಗೆ ಮೀಸಲಿಟ್ಟಿದ್ದ 11 ಸಾವಿರ ಕೋಟಿ ರೂ.,ಗಳನ್ನು ಇತರೆಡೆಗೆ ಮನಸೋಇಚ್ಛೆ ಬಳಸಲಾಗಿದೆ. ಹೀಗಾಗಿ ದಲಿತ ಸಮುದಾಯದವರು ರಾಜ್ಯಕ್ಕೆ ಕೊಡುಗೆ ನೀಡಿದ ನಾಲ್ವಡಿ ಅವರ ವಂಶಸ್ಥರಾದ ಯದುವೀರ್ ಹಾಗೂ ಚಾಮರಾಜನಗರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಬಾಲರಾಜು ಅವರಿಗೆ ಮತ ನೀಡಬೇಕೆಂದು ಕೋರಿದರು.
ಮತ್ತೋರ್ವ ಮಾಜಿ ಶಾಸಕ ಅಶ್ವಿನ್ ಕುಮಾರ್, ಎಸ್.ಬಿ.ಎಂ.ಮಂಜು, ಶಿವಕುಮಾರ್ ಹಾಜರಿದ್ದರು.