ಕ್ಷೇತ್ರದ ಮತದಾರರೇ ನನ್ನ ಹೈಕಮಾಂಡ್: ನಿತೀನ್ ಗುತ್ತೇದಾರ್
ಅಫಜಲಪುರ:ಏ.7: ಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಗೆದ್ದರೂ ಸಹ 30 ರಿಂದ 35 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಆ ಮತಗಳನ್ನು ಪಡೆಯಲು ಅಫಜಲಪುರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸುವ ಅಭ್ಯರ್ಥಿಗೆ ನಾನು ಬೆಂಬಲಿಸುತ್ತೇನೆ. ಈ ಬಾರಿಯ ಫಲಿತಾಂಸ ಚಹಾ ಕೇಟಲಿ ನಿರ್ಣಯದ ಹೊರ ಬರಲಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್ ತಿಳಿಸಿದರು.
ತಾಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದೀರಿ.
ಈಗ ಲೋಕಸಭೆ ಚುನಾವಣೆ ಇರುವುದರಿಂದ ಕ್ಷೇತ್ರದ ಅಭಿವೃದ್ಧಿ ಮತ್ತು ಕಾರ್ಯಕರ್ತರ ಹಿತ ಕಾಪಾಡುವ ಪಕ್ಷಕ್ಕೆ ಬೆಂಬಲಿಸುತ್ತೇನೆ. ಹೀಗಾಗಿ ನಿಮ್ಮ ಸಲಹೆಯಂತೆ ನಾನು ಯಾವುದೇ ನಿರ್ಣಯ ಕೈಗೊಂಡರೂ ತಾವೆಲ್ಲರೂ ಬೆಂಬಲಿಸಬೇಕು. ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತ ಮರುದಿನವೇ ಮತ್ತೇ ಕ್ಷೇತ್ರದ ಜನರ ಸೇವೆಯಲ್ಲಿದ್ದೇನೆ. ನನಗೆ ನಂಬಿ ಬೆಂಬಲಿಸಿದ ಎಲ್ಲರ ಸುಖ ದುಃಖದಲ್ಲಿ ಭಾಗಿಯಾಗಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸುವ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಈಗಾಗಲೇ ಹಿರಿಯರು, ಯುವಕರು ಹೇಳಿದ ಸಲಹೆಯಂತೆ ನಾನು ನಿರ್ಣಾಯ ಕೈಗೊಳ್ಳುತ್ತೇನೆ. ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿ ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಅದರಂತೆ ನನ್ನ ಹೈಕಮಾಂಡ್ ನನ್ನ ಕ್ಷೇತ್ರದ ಮತದಾರರು ಎಂದು ಹೇಳಿ ನಿಮ್ಮ ಮುಂದೆ ಬಂದಿದ್ದೇನೆ.ಈ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಕೇಟಲಿ ಬೇಕೆ ಬೇಕು ಹೀಗಾಗಿ ಇನ್ನೂ ಎರಡ್ಮೂರು ದಿನಗಳಲ್ಲಿ ಒಂದು ನಿರ್ಣಯ ಕೈಗೊಳ್ಳಲಾಗುವುದು. ಹೀಗಾಗಿ ತಾವೆಲ್ಲರೂ ನಾನು ಯಾವುದೇ ಪಕ್ಷಕ್ಕೆ ಬೆಂಬಲಿಸಿದರೂ ಕ್ಷೇತ್ರದ ಅಭಿವೃದ್ಧಿ ಮತ್ತು ಕಾರ್ಯಕರ್ತರ ಹಿತ ದೃಷ್ಟಿಯಿಂದ ನಿರ್ಣಯ ಕೈಗೊಳ್ಳುವುದರಿಂದ ಎಲ್ಲರೂ ಒಮ್ಮತದಿಂದ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ,ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸುವ ಉದ್ದೇಶ ಶಾಸಕ ಎಂ.ವೈ.ಪಾಟೀಲ್ ಅವರಿಗೆ ಇಲ್ಲ ಎಂದು ಅನಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ 52 ಸಾವಿರ ಮತಗಳನ್ನು ಪಡೆದುಕೊಂಡಿರುವ ನಿತೀನ್ ಗುತ್ತೇದಾರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತೇನೆ ಅಂದಾಗ ಅವರು ಕಾಂಗ್ರೆಸ್ ಬಂದರೆ ನಾನು ಪಕ್ಷ ಬಿಡುತ್ತೇನೆಂದು ಹೇಳುವುದರ ಉದ್ದೇಶ ಏನಿದೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿ ಅಥವಾ ಸೋಲಲಿ ಆದರೆ ನಿತೀನ್ ಗುತ್ತೇದಾರ್ ಮಾತ್ರ ಕಾಂಗ್ರೆಸ್ ಗೆ ಬರಬಾರದು ಎನ್ನುವ ಮನೋಭಾವಕ್ಕೆ ಬಂದಿದ್ದಾರೆ. ಆದರೆ ನಿತೀನ್ ಗುತ್ತೇದಾರ್ ಈ ಕ್ಷೇತ್ರದ ಯುವ ಸಾರಥಿ ಹೀಗಾಗಿ ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬೆಂಬಲಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ತುಕಾರಾಮಗೌಡ ಪಾಟೀಲ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 52 ಸಾವಿರ ಮತಗಳನ್ನು ಪಡೆದುಕೊಂಡಿರುವ ನಿತೀನ್ ಗುತ್ತೇದಾರ್ ಈಗ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ.
ನಿತೀನ್ ಗುತ್ತೇದಾರಗೆ ಯಾರೇ ತುಳಿಯಲು ಪ್ರಯತ್ನಿಸಿದರೂ ಅವರ ಆಟ ನಡೆಯುವುದಿಲ್ಲ. ಏಕೆಂದರೆ ಅವರ ಬಳಿ ಈ ಕ್ಷೇತ್ರದ ಮತದಾರರ ಆಶೀರ್ವಾದ ಇರುವುದರಿಂದ ಯಾರೂ ಕೂಡ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ. ಸರಕಾರದಿಂದ 12 ಸಾವಿರ ಮನೆಗಳು ಬಂದಿವೆ, ಅವುಗಳನ್ನು ಬಡ ಜನರಿಗೆ ಹಂಚಿಕೆ ಮಾಡಲು ಪ್ರತಿಯೊಬ್ಬರಿಂದ 20 ಸಾವಿರ ರೂ. ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ದುರಾಡಳಿತ ದಿನೇ ದಿನೇ ಹೆಚ್ಚಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಬೆಂಬಲಿಸುವಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ನಿತೀನ್ ಗುತ್ತೇದಾರ್ ಮೇಲೆ ಒತ್ತಡ ಹಾಕುತ್ತಿದ್ದು, ಮುಂದೆ ಅವರು ಕೈಗೊಳ್ಳುವ ನಿರ್ಣಯಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದರು.
ಸಭೆಯಲ್ಲಿ ಭಾಷಾ ಪಟೇಲ್ ಹಸರಗುಂಡಗಿ, ಈರಯ್ಯ ಸ್ವಾಮಿ, ರಮೇಶ್ ಬಾಕೆ, ರಾಜಶೇಖರ ಜಿಡ್ಡಗಿ, ವಿಶ್ವನಾಥ ಕಾರ್ನಾಡ್, ಮಹಾದೇವ ಗುತ್ತೇದಾರ್, ನಾಗೇಶ್ ಕೊಳ್ಳಿ, ಶಂಕರ ಮ್ಯಾಕೇರಿ, ಗುರು ಸಾಲಿಮಠ, ಜ್ಯೋತಿಪ್ರಕಾಶ್ ಪಾಟೀಲ್, ಸುಭಾಷ್ ರಾಠೋಡ, ರಾಜುಗೌಡ ಅವರಳ್ಳಿ, ಪುಟ್ಟು ಸಜ್ಜನ್, ಬೀರಣ್ಣ ಕನಕ ಟೇಲರ, ಭಗವಂತರಾಯ ಕಾಮದಿ, ಶಿವಶರಣಪ್ಪ ಪಡಶೆಟ್ಟಿ, ಶ್ರೀಮಂತ ಅಂಜುಟಗಿ, ಹಿರೋಜರಾಜ್ ಪಾಟೀಲ್, ಸೈಬಣ್ಣಾ ಪುಜಾರಿ, ರವಿ ಕುಲಾಲಿ, ನೂರಅಹ್ಮದ್ ಬಾಗವಾನ್, ಸಚಿನ್ ರಾಠೋಡ, ಸುನೀಲ್ ಶೆಟ್ಟಿ, ಸಿದ್ದು ಮ್ಯಾಕೇರಿ, ಧಾನು ಪತಾಟೆ, ರಾಜು ಸಂಗೋಳಗಿ, ಮುತ್ತು ಜಮಾದಾರ, ಸಿದ್ದು ಜಮಾದಾರ ಸೇರಿದಂತೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
ನಿತೀನ್ ಗುತ್ತೇದಾರ್ ಅಫಜಲಪುರ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದಾರೆ. ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸಿದ್ದೇನೆ. ಅದರಂತೆ ಈಗಲೂ ಲೋಕಸಭೆ ಚುನಾವಣೆಯಲ್ಲಿ ಅವರು ಯಾವ ಪಕ್ಷಕ್ಕೆ ಬೆಂಬಲಿಸುತ್ತಾರೊ ಆ ಪಕ್ಷಕ್ಕೆ ನಮ್ಮ ಬೆಂಬಲ ಇದೆ.
-ದಿಲೀಪ್ ಪಾಟೀಲ್ ಜಿಪಂ ಮಾಜಿ ಸದಸ್ಯರು
ನಿತೀನ್ ಗುತ್ತೇದಾರ್ ಗೆ ಯಾವ ಪಕ್ಷ ಗೌರವ ನೀಡುತ್ತದೆಯೋ ಆ ಪಕ್ಷಕ್ಕೆ ಬೆಂಬಲಿಸುತ್ತೇವೆ. ಈ ಬಾರಿ ಚಹಾ ಕೇಟಲಿ ನಿರ್ಣಯದ ಮೇಲೆ ಲೋಕಸಭೆ ಫಲಿತಾಂಶ ಹೊರ ಬರಲಿದೆ.
-ಬಸವರಾಜ್ ಚಾಂದಕವಟೆ, ಮುಖಂಡರು ಗುಡ್ಡೇವಾಡಿ.
ನಿತೀನ್ ಗುತ್ತೇದಾರ್ ನಿರ್ಣಯವೇ ನಮ್ಮೆಲ್ಲರ ಅಂತಿಮ ತೀರ್ಮಾನ ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲ ಬೆಂಬಲಿಗರು ಮತ್ತು ಕಾರ್ಯಕರ್ತರು ತಮ್ಮ ಎರಡು ಕೈಗಳನ್ನು ಮೇಲೆತ್ತುವ ಮೂಲಕ ಬೆಂಬಲ ಸೂಚಿಸಿದರು.