ಜಿಲ್ಲೆಯ ವಿವಿಧ ಗ್ರಾಮಗಳಿಗೆ ಆರ್.ಡಿ.ಪಿ.ಆರ್. ಅಪರ ಮುಖ್ಯ ಕಾರ್ಯದರ್ಶಿ ಭೇಟಿ:ಕುಡಿಯುವ ನೀರು ಕಾಮಗಾರಿ ಪರಿಶೀಲನೆ
ಕಲಬುರಗಿ:ಏ.6: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರು ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜೆ.ಜೆ.ಎಂ ಕುಡಿಯುವ ನೀರು ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸಿದರು.
ಗುರುವಾರ ಕಮಲಾಪೂರ ತಾಲೂಕಿನ ಕಿಣ್ಣಿಸಡಕ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆಯಡಿಯಲ್ಲಿ ಕೈಗೊಂಡ ಎಸ್.ವಿ.ಎಸ್. ಕಾಮಗಾರಿಯನ್ನು ಪರಿಶೀಲಿಸಿದ ಅವರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು‌. ಪ್ರತಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮನೆ ಮನೆಗೆ ನಲ್ಲಿ ಸಂಪರ್ಕ ಒದಗಿಸಲಾಗಿದಿಯೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅಂಜುಮ್ ಪರ್ವೇಜ್ ಅವರು, ಗ್ರಾಮದ ಪ್ರತಿ ಮನೆಗೆ ಶುದ್ಧ ನೀರು ಒದಗಿಸಬೇಕೆಂದು ಮತ್ತು ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕೆಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ. ಅವರಿಗೆ ಸೂಚಿಸಿದರು. ಸ್ಥಳದಲ್ಲಿದ್ದ ಶಾಖಾಧಿಕಾರಿಗಳು ತೆರೆದ ಬಾವಿ, ಕೊಳವೆ ಬಾವಿಯಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಲಾಗುತ್ತಿದೆ. ಡಿ.ಎಮ್.ಎಫ್ ನಿಧಿ ಅಡಿಯಲ್ಲಿ 50 ಕೆ.ಎಲ್ ಸಾರ್ಮಥ್ಯ ಓ.ಎಚ್.ಟಿ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಹೊಸ ಕೊಳವೆ ಬಾವಿ ಸಹ ಕೊರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಮನೆಗೆ ನೀರು ಒದಗಿಸಲಾಗುವುದೆಂದು ಮಾಹಿತಿ ನೀಡಿದರು.
ನಂತರ ಲಿಂಬುನಾಯಕ ತಾಂಡಾಕ್ಕೆ ಭೇಟಿ ನೀಇಡದ ಎ.ಸಿ.ಎಸ್. ಅವರು ಅಲ್ಲಿ ನಡೆಯುತ್ತಿರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಕೈಗೊಂಡ ರಸ್ತೆ ಕಾಮಗಾರಿ ಪರಿಶೀಲಿಸಿದರು. 4.ಕೀ.ಮಿ ಉದ್ದದ ರಸ್ತೆ ನಿರ್ಮಾಣ ಮಾಡಲು ಮಂಜೂರಾತಿ ಪಡೆದು ಕಾಮಗಾತಿ ಪೂರ್ಣಗೊಳಿಸದೆ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಪಿ.ಎಂ.ಜಿ.ಎಸ್.ವೈ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ನಂತರ ಅವರು ಬಾಚನಾಳ ಮತ್ತು ಓಕಳಿ ಗ್ರಾಮಕ್ಕೆ ಭೇಟಿ ನೀಡಿ ಜೆ. ಜೆ. ಎಮ್ ಕಾಮಗಾರಿ, ಜೀವಣಗಿ ಗ್ರಾಮದಲ್ಲಿ ನರೇಗಾನಡಿ ಕೈಗೊಂಡ ಕಲ್ಯಾಣಿ ಬಾವಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು. ಒಟ್ಟಾರೆಯಾಗಿ ಎಲ್ಲಿಯೂ ಕುಡಿಯುವ ನೀರಿನ ಅಭಾವವಾದಂತೆ ನೋಡಿಕೊಂಡು ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ನೀರು ಮಿತವಾಗಿ ಬಳಕೆ ಎಂದರು.
ಮರಗಳ ವೀಕ್ಷಣೆ:
ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಅವರು ಶುಕ್ರವಾರ ಸಹ ಜಿಲ್ಲೆಯ ವಿವಿಧ ಗ್ರಾಮಕ್ಕೆ ಭೇಟಿ‌ ನೀಡಿದರು. ಮೊದಲಿಗೆ ಕಲಬುರಗಿ ತಾಲೂಕಿನ ನಂದಿಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟನೂರ ‘ಡಿ’ ಗ್ರಾಮದ ಸಾರ್ವಜನಿಕ ಮಹಿಳಾ ಶೌಚಾಲಯ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿಯ ಗುಣಮಟ್ಟ ಕಾಪಾಡಿ ಎಂದು ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ನಂತರ ಹೊನ್ನಕಿರಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೊ ಲಕ್ಷ ವೃಕ್ಷ ಅಭಿಯಾನದಡಿಯಲ್ಲಿ ಬೆಳೆಸಲಾದ ಮರಗಳ ವೀಕ್ಷಣೆ ಮಾಡಿದರು. ಅಭಿಯಾನದ ಅಂಗವಾಗಿ 1 ಲಕ್ಷ ಮರಗಳನ್ನು ಬೆಳೆಸಲಾಗಿದ್ದು, ಅದರಲ್ಲಿ ಅಂದಾಜು 30 ಸಾವಿರ ಮರಗಳು ನೀರಿನ ಕೊರತೆಯಿಂದ ಹಾಳಾಗಿದ್ದನ್ನು ಕಂಡ ಅವರು, ಇದನ್ನು ಪ್ರಸ್ತುತ ಆರ್ಥಿಕ ವರ್ಷದ ಕ್ರಿಯಾ ಯೋಜನೆಯಡಿ ಅನುಷ್ಠಾನಗೊಳಿಸಿ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ನಂತರ ತಾಜಸುಲ್ತಾಪೂರ ಗ್ರಾಮಕ್ಕೆ ಭೇಟಿ ನೀಡಿ ಎಸ್.ಬಿ.ಎಮ್ ಯೋಜನೆಯಡಿ ನಿರ್ಮಿಸಲಾದ ಮಲ ಸಂಸ್ಕರಣ (ಎಫ್.ಎಸ್.ಟಿ.ಪಿ) ಘಟಕಕ್ಕೆ ಭೇಟಿ ನೀಡಿ, ಘಟಕದ ಅವಶ್ಯಕತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದರು. ಇದೇ ಸಂದರ್ಭದಲ್ಲೊ ಅವರಾದ (ಬಿ) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಿಸಲಾದ ಶಾಲಾ ಆಟದ ಮೈದಾನ ಕಾಮಗಾರಿ ಸಹ ವೀಕ್ಷಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.