ಪ್ರಪಂಚದಲ್ಲಿದ್ದು ಪಾರಮಾರ್ಥ ಜೀವನ ಶ್ರೇಷ್ಠ
ಕಲಬುರಗಿ:ಏ.6: ಪ್ರಪಂಚದಲ್ಲಿದ್ದುಕೊಂಡು ಪಾರಮಾರ್ಥ ಜೀವನ ಮಾಡುವುದು ಶ್ರೇಷ್ಠವೆಂದು ಅಭಿಪ್ರಾಯಪಟ್ಟವರು ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರ ಮಹಾಂತೇಶ್ವರ ಶಿವಾಚಾರ್ಯರು.
ಶುಕ್ರವಾರ 6ನೇ ದಿನದಂದು ಸಂಜೆ ಶ್ರೀ ಗುಡ್ಡಾಪೂರ ವರದಾನೇಶ್ವರಿ' ಪುರಾಣ ಹೇಳುತ್ತಾ, 12ನೇ ಶತಮಾನದ ಶರಣರೆಲ್ಲರೂ ವೈವಾಹಿಕ ಜೀವನ ಮಾಡಿಯೇ ಪಾರಮಾರ್ಥದತ್ತ ಸಾಗಿದವರು. ಅದರಲ್ಲೂ ಬಸವಣ್ಣನವರು ಇಬ್ಬರು ಪತ್ನಿಯರನ್ನು ವರಿಸಿ, ಪಾರಮಾರ್ಥ ಜೀವನ ಮಾಡಿದವರು. 18ನೇ ಶತಮಾನದ ಕಲಬುರಗಿಯ ಶ್ರೀ ಶರಣಬಸವೇಶ್ವರರು ಮದುವೆಯಾಗಿಯೇ ಕಲ್ಯಾಣ ಕರ್ನಾಟಕದಲ್ಲಿ ದಾಸೋಹ ಪರಂಪರೆ ಹಾಕಿ, ಇವತ್ತು ಜನಮಾನಸದಲ್ಲಿ ಅಮರರಾಗಿದ್ದಾರೆ ಎಂದು ವಿವರಿಸಿದರು. ಲಿಂಗಮ್ಮ, ಹೆತ್ತವರಿಗೆ ಕೊಟ್ಟ ಮಾತಿನಂತೆ ಬಸವ ದರ್ಶನ ಪಡೆದುಕೊಂಡು ದಾನೇಶ್ವರಿ ಎಂಬ ನೂತನ ನಾಮಧೇಯದೊಂದಿಗೆ ಮರಳಿ ಉಮ್ರಾಣಿಗೆ ಬರುತ್ತಾಳೆ. ಸೋಮೇಶ್ವರ ಅವರೊಂದಿಗೆ ವಿವಾಹವಾಗಿ ಪ್ರಾಪಂಚಿಕ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾಳೆ. ಜನರ ಸೇವೆ ಮಾಡುತ್ತಲೇ ಜನಾರ್ಧನರನ್ನು ಆರಾಧಿಸುತ್ತಿರುವ ಮಹಾಶರಣೆ ಎಂದರು. ವೇದಿಕೆ ಮೇಲೆ ಶರಣ ಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು ಉಪಸ್ಥಿತರಿದ್ದರು. ನ್ಯಾಯವಾದಿ ದೇವಿಂದ್ರಪ್ಪ ಎಕಲೂರು, ಮಹಾಂತೇಶ ಚೇಂಗಟಿ ನಿರೂಪಿಸಿದರು. ದಾನಮ್ಮ ತಾಯಿ ಹಾಗು ಸೋಮೇಶ್ವರ ಅವರ ವಿವಾಹ ಅತ್ಯಂತ ವೈಭಾವದಿಂದ ನಡೆಯಿತು. ಇದೆಲ್ಲಕ್ಕೂ ನಂದೀಶ್ವರನಾಗಿರುವ ಕುಪೇಂದ್ರ ಬಿರಾಜದಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಕೋಟಿ ಜನರು ಸಾಕ್ಷಿಯಾಗಿದ್ದರು. ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು. ಇದೇ ಸಂದರ್ಭದಲ್ಲಿ ಖ್ಯಾತ ಉದ್ದಿಮೆದಾರರು ಹಾಗು ಸಮಾಜ ಸೇವಕರಾಗಿರುವ ದೇವಿಕಾ ಶರಣು ಶೆಟ್ಟಿಯವರಿಗೆಶಂಕರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.