ಆರೋಗ್ಯ ಇಲಾಖೆಯಲ್ಲಿ ಹಣದ ಕೊರತೆ ಪುತ್ತೂರು ಸರ್ಕಾರಿ ಆಸ್ಪತ್ರೆಗೂ ಸಾಲಗಾರರ ಕಾಟ..!

ಪುತ್ತೂರು; ಜಿಲ್ಲೆಯಲ್ಲಿ ಎರಡನೆಯ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ವ್ಯವಸ್ಥೆಗೆ ಬರಬೇಕಾದ ನಿರ್ವಹಣಾ ವೆಚ್ಚದ ಹಣದ ಕೊರತೆ ಉಂಟಾಗಿದ್ದು, ಸುಮಾರು ರೂ.೨೦ ಲಕ್ಷಕ್ಕೂ ಹೆಚ್ಚು ಹಣ ವಿವಿಧ ನಿರ್ವಹಣೆಗಳಿಗೆ ಸಂಬಂಧಿಸಿ ಸರ್ಕಾರದಿಂದ ಬರಬೇಕಾಗಿದೆ. ಇದರಿಂದ ಪುತ್ತೂರು ಸರ್ಕಾರಿ ಆಸ್ಪತ್ರೆ ಸಾಲಗಾರರ ಕೈಗೆ ಸಿಲುಕಿ ಒದ್ದಾಡುವಂತಾಗಿದೆ.
ರಾಜ್ಯದ ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿರುವ ಪುತ್ತೂರಿನಲ್ಲಿಯೇ ಸರ್ಕಾರಿ ಆಸ್ಪತ್ರೆ ಸಾಲದ ಸುಳಿಗೆ ಸಿಲುಕಿರುವುದು ಜಿಲ್ಲೆಯ ಘನತೆಗೆ ಕುಂದುಂಟು ಮಾಡಿದೆ.
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಜನರೇಟರ್ ಹಾಗೂ ೨ ಆಂಬುಲೆನ್ಸ್ ಗಳಿವೆ. ಇದರ ತಿಂಗಳ ಡೀಸೆಲ್ ವೆಚ್ಚದ ಮೊತ್ತ ಸುಮಾರು ರೂ.೧ಲಕ್ಷ  ಆಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಹಿಂದಿನಿಂದಲೂ ಒಂದೇ ಪೆಟ್ರೋಲ್ ಪಂಪಿನಿಂದ ಡೀಸೆಲ್ ಸರಬರಾಜುಗೊಳ್ಳುತ್ತಿದೆ. ಆದರೆ ಇದೀಗ ಪೆಟ್ರೋಲ್ ಪಂಪಿನ ಮಾಲಕರು ಡೀಸೆಲ್ ನೀಡುವುದಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ. ಕಾರಣ ಅವರಿಗೆ ಡೀಸೆಲ್ ನೀಡಿದ ಬಾಬ್ತು ರೂ.೫ ಲಕ್ಷ ಬಾಕಿ…!
ಜನರೇಟರ್ ವ್ಯವಸ್ಥೆ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಗೆ ಅತ್ಯಂತ ಅಗತ್ಯವಾದ ಮೂಲ ಸೌಕರ್ಯಗಳಾಗಿದ್ದು, ಇದರ ನಿರ್ವಹಣೆಗೆ ಆರೋಗ್ಯ ಇಲಾಖೆ ಹಣ ನೀಡದೆ ಸತಾಯಿಸುತ್ತಿರುವ ಕಾರಣ ಇದೀಗ ಸಾಲಗಾರರು ಸರ್ಕಾರಿ ಆಸ್ಪತ್ರೆಯನ್ನು ಸತಾಯಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯನ್ನು ಹೇಗಾದರೂ ಸರಿಪಡಿಸುವ ಜತೆಗೆ ನಂಬಿಕೆಯ ಮೇಲೆಯೇ ಡೀಸೆಲ್ ನೀಡುತ್ತಿರುವ ಪೆಟ್ರೋಲ್ ಪಂಪು ಮಾಲಕರ ನಂಬಿಕೆಯನ್ನು ಉಳಿಸಿಕೊಳ್ಳಲು ‘ಆರೋಗ್ಯ ರಕ್ಷಾ ನಿಧಿಯಿಂದ ರೂ.೧ಲಕ್ಷ ಪಾವತಿಸುವ ಮೂಲಕ ಬೀಸುವ ದೊಣ್ಣೆಯಿಂದ ಆಸ್ಪತ್ರೆಯನ್ನು ಪಾರು ಮಾಡುವ ಕೆಲಸ ಪ್ರಸ್ತುತ ಆಸ್ಪತ್ರೆಯ ಆಡಳಿತ ಮಂಡಳಿಯಿಂದಾಗಿದೆ.
ಅದರೆ ೫ ಲಕ್ಷ ನೀಡುವ ಕಡೆಗೆ ೧ ಲಕ್ಷ ಕೊಟ್ಟಿರುವುದು ಪೆಟ್ರೋಲ್ ಪಂಪಿನ ಮಾಲಕರಿಗೆ ಸದ್ಯಕ್ಕೆ ಅಲ್ಪತೃಪ್ತಿಯಾಗಿದ್ದರೂ  ಸರ್ಕಾರದಿಂದ ಹಣ ಬರದೇ ಇದ್ದರೆ ಮತ್ತೆ ಸಾಲಗಾರರು ಸರ್ಕಾರಿ ಆಸ್ಪತ್ರೆಯ ಮುಂದೆ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣ ಅನಿವಾರ್ಯವಾಗಲಿದೆ.
ಇದರ ಜತೆಗೆ ಆಂಬುಲೆನ್ಸ್ ದುರಸ್ಥಿಗೂ ಹಣ ಬರುತ್ತಿಲ್ಲವಂತೆ.. ಕಳೆದ ೧೫ ದಿನಗಳ ಹಿಂದೆ ರೂ.೧.೩೦ ಲಕ್ಷ ಹಣವನ್ನು ಆರೋಗ್ಯ ಇಲಾಖೆ ನೀಡಿದ್ದು, ಇದರಲ್ಲಿ ೯೦ ಸಾವಿರ ಆಂಬುಲೆನ್ಸ್ ದುರಸ್ಥಿಗೆ ಮುಗಿದಿದೆ. ಉಳಿಕೆ ೩೦ ಸಾವಿರದ ಜತೆಗೆ ೭೦ ಸಾವಿರ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಸೇರಿಸಿ ಡೀಸೆಲ್‌ಗೆ ನೀಡಲಾಗಿತ್ತು.
ಮೊಟ್ಟೆಯ ಕತೆ..
ಡೀಸೆಲ್ ವಿಚಾರ ಒಂದಾದರೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಆಹಾರ ಸಾಮಾಗ್ರಿ ಪೂರೈಕೆ ಮಾಡುವ ಗುತ್ತಿಗೆದಾರರ ಕೂಡಾ ಸಾಲಗಾರರ ಪಟ್ಟಿಯಲ್ಲಿದ್ದಾರೆ. ಟೆಂಡರ್ ಮೂಲಕ ಆಹಾರ ಪೂರೈಕೆ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಕಳೆದ ಒಂದು ವರ್ಷದಿಂದ ಸರ್ಕಾರ ಹಣ ನೀಡದೇ ಇರುವ ಕಾರಣ ಆಹಾರ ಪೂರೈಕೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಾರ ಈ ಹಿನ್ನಲೆಯಲ್ಲಿಯೇ ಆಸ್ಪತ್ರೆಯ ರೋಗಿಗಳಿಗೆ ನೀಡಲಾಗುವ ‘ಮೊಟ್ಟೆ’ಗೆ ತತ್ವಾರ ಉಂಟಾಗಿತ್ತು. ಊಟದ ಜತೆಗೆ ಮೊಟ್ಟೆ ನೀಡದ ಆಸ್ಪತ್ರೆ ವಿರುದ್ದ ರೋಗಿಗಳ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂ ರಕ್ಷಾ ಸಮಿತಿ ನಿಧಿಯಿಂದ ಹಣ ಪೂರೈಕೆ ಮಾಡಿ ಮೊಟ್ಟೆ ನೀಡಲಾಗಿತ್ತು.
ಇದೀಗ ಪುತ್ತೂರು ಸರ್ಕಾರಿ ಆಸ್ಪತ್ರೆಯ ವಿವಿಧ ನಿರ್ವಹಣೆಗಳಿಗೆ ಸರ್ಕಾರ ಹಣ ನೀಡದಿರುವ ಕಾರಣ ಇಲ್ಲಿನ ನೌಕರರು, ವೈದ್ಯರು ಹಾಗೂ ಆಡಳಿತ ವ್ಯವಸ್ಥೆ ಕಂಗೆಡುವಂತಹ ಸ್ಥಿತಿಯಾಗಿದೆ.
—ಗ್ಯಾರಂಟಿ ಭರದಲ್ಲಿ…
ರಾಜ್ಯ ಸರ್ಕಾರ ತನ್ನ ಉಚಿತ ಗ್ಯಾರಂಟಿಗಳಿಂದ ಆರ್ಥಿಕ ಸ್ಥಿತಿಯನ್ನು ದುಸ್ಥಿತಿ ಮಾಡಿಕೊಂಡಿದೆ ಎಂಬುವುದಕ್ಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬರಬೇಕಾದ ಹಣ ಬರದಿರುವುದೇ ಸಾಕ್ಷಿಯಾಗಿದೆ. ಗ್ಯಾರಂಟಿಯ ಬರದಲ್ಲಿ ಸರ್ಕಾರಿ ಆಸ್ಪತ್ರೆಗಳು ಮೂಲಸೌಕರ್ಯಗಳಿಂದ ವಂಚಿತಗೊಳ್ಳುತ್ತಿವೆ. ಪುತ್ತೂರು ಆಸ್ಪತ್ರೆಗೆ ವಿವಿಧ ನಿರ್ವಹಣೆಗಾಗಿ ಬರಬೇಕಾದ ಸುಮಾರು ೨೦ ಲಕ್ಷ ಹಣ ಬಾಕಿಯಾಗಿದೆ. ಸರ್ಕಾರಕ್ಕೆ ಜನಾರೋಗ್ಯ ಕಾಳಜಿ ಇದ್ದಲ್ಲಿ ತಕ್ಷಣ ಆಸ್ಪತ್ರೆಗಳು ಸಾಲಗಾರರ ಕಪಿಮುಷ್ಠಿಗೆ ಸಿಲುಕುವುದನ್ನು ತಪ್ಪಿಸಲಿ.. ಸಂಜೀವ ಮಠಂದೂರು ಮಾಜಿ ಶಾಸಕರು ಪುತ್ತೂರು.


ಮೇಘಾ ಪಾಲೆತ್ತಾಡಿ.
