ಮತದಾನ ಕುರಿತು ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ
ಕಲಬುರಗಿ:ಏ.6:ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕಲಬುರಗಿ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಶನಿವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ, ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲರೂ ಸಾರ್ವಜನಿಕರು ಕಡ್ಡಾಯವಾಗಿ ಮತದಾನದ ಮಾಡಬೇಕೆಂದು ಜಾಗೃತಿ ಮೂಡಿಸಬೇಕೆಂದರು.
ಈ ರಂಗೋಲಿ ಸ್ಪರ್ಧೆಯಲ್ಲಿ ಕಲಬುರಗಿ ತಾಲೂಕು ಪಂಚಾಯತ್ ಸಿಬ್ಬಂದಿ ತಂಡಕ್ಕೆ ಮೊದಲನೇ ಸ್ಥಾನ, ಎನ್.ಆರ್.ಎಲ್.ಎಂ. ತಾಲೂಕು ಪಂಚಾಯತ್ ತಂಡ ಮತ್ತು ಶ್ರೀಮತಿ ಕವಿತಾ ಕಾಗೆ ತಂಡಕ್ಕೆ ಎರಡನೇ ಸ್ಥಾನ ಹಾಗೂ ಎಸ್.ಹೆಚ್.ಜಿ. ಶಿವಲೀಲಾ ತಂಡವು ಮತ್ತು ಅವರಾದ (ಬಿ) ಎಸ್.ಹೆಚ್.ಜಿ. ತಂಡಕ್ಕೆ ಮೂರನೇ ಸ್ಥಾನ ಘೋಷಿಸಲಾಯಿತು. ನಂತರ ಈ ತಂಡಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಪಟೇಲ್, ಕಲಬುರಗಿ (ಪ.ರಾ.) ಸಹಾಯಕ ನಿರ್ದೇಶಕ ವಿಶ್ವನಾಥ ಎಮ್., ತಾಲೂಕು ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರೇ-1 ಮತ್ತು ಗ್ರೇಡ್-2ಕಾರ್ಯದರ್ಶಿಗಳು, , ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಎನ್.ಆರ್.ಎಲ್.ಎಮ್. ಒಕ್ಕೂಟದ ಮಹಿಳೆಯರು ಮತ್ತು ಸ್ವಸಹಾಯ ಸಂಘದ ಮಹಿಳೆಯರು ರಂಗೋಲಿ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.